ಮನು ನಿಮಿಷಕ್ಕೊಮ್ಮೆ ಮೊಬೈಲ್ ತೆಗೆದು ನೋಡುವನು ಏನಾದರೂ ರಿಪ್ಲೈ ಇದೆಯೇ ಶಿಲ್ಪಾಳಿಂದ ಎಂದು ಏನೂ ಇಲ್ಲ, ಬದಲಿಗೆ ಇರುವ ಎಲ್ಲ ಪಡ್ಡೆ ಗೆಳೆಯರ ವಾಟ್ಸ್ಅಪ್ ಗ್ರೂಪ್ಗಳಲ್ಲಿ ನೂರಾರು ಮೆಸೇಜ್ಗಳು, ಸುಮ್ಮನೆ ಮತ್ತೆ ಮೊಬೈಲ್ ಕಿಸೆ ಸೇರಿಸುವನು. ವಾಟ್ಸ್ ಅಪ್ನ ರೆಡ್ ರಿಸಿಪ್ಟ್ ಬೇರೆ ಆಫ್ ಮಾಡಿದಾಳೆ ಶಿಲ್ಪಾ, ಮೆಸೇಜ್ ಡೆಲಿವರ್ಡ್ ಎಂದು ಮಾತ್ರ ತೋರಿಸುತ್ತೆ ಫೋನ್, ಈ ಹಾಳು ಹುಡ್ಗೀರೆ ಹೀಗೆ ಅವರು ಮೆಸೇಜ್ ಓದಿದಾರೋ ಇಲ್ಲವೋ ಅನ್ನೋದನ್ನ ಕೂಡ ಬಿಟ್ಟುಕೊಡಲ್ಲ, ನಿಜವಾಗ್ಲೂ ಅವರ ಮನ ಮೀನಿನ ಹೆಜ್ಜೆ ಅಂದುಕೊಂಡನು. ಬೆಳಿಗ್ಗೆ ಶಿಲ್ಪಾಳಿಂದ ಒಂದೇ ಒಂದು ಮೆಸೇಜ್ ಬಂದರೂ ಆ ದಿನಪೂರ್ತಿ ಹರ್ಷದ ಕ್ಷಣದಂತೆ ಸಾಗುವುದು ಮನುಗೆ, ಅವಳಿಂದ ಒಂದೇ ಒಂದು ರೆಸ್ಪಾನ್ಸ್ ಇಲ್ಲದ ದಿವಸ ದಿನವೆಲ್ಲಾ ನರಕದಂತೆ ಕಳೆಯುವನು ಅವನು. ಹೀಗೆಯೇ ಅವಳ ಧ್ಯಾನದಲ್ಲೇ ಕೂತ ಮನುವಿನ ಚಿತ್ತ ಅವಳನ್ನು ಮೊದಲು ನೋಡಿದ ಆ ದಿನದತ್ತ ಹರಿಯಿತು.
ಮನು ತನ್ನ ರೂಮ್ಮೇಟ್ಸ್ ಜೊತೆ ಹರಟುತ್ತಾ ಲ್ಯಾಪ್‌ಟಾಪ್ನಲ್ಲಿ ಮೂವೀ ನೋಡುತ್ತಿರಲು ಸಮಯ ನೋಡಿದನು 12 ಘಂಟೆ ಮಧ್ಯರಾತ್ರಿ ಮಾರ್ಚ್ 12, ತಕ್ಷಣ ತನ್ನ ಮೊಬೈಲ್ ತೆಗೆದು ಕಾರ್ತಿಕ್ಗೆ ರಿಂಗಣಿಸಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದನು. ಮರುದಿನ ಸಂಜೆ ಕಾರ್ತಿಕ್ನ ಬರ್ತ್‌ಡೇ ಸೆಲೆಬ್ರೇಶನ್ಗೋಸ್ಕರ ತನ್ನ ಇತರ ಗೆಳೆಯರೊಂದಿಗೆ ಅವರ ಮನೆ ಕಡೆ ನಡೆದನು. ಎಲ್ಲರೂ ಸೇರಿ ಬರ್ತ್‌ಡೇ ಬಾಯ್ಗೆ ಬರ್ತ್‌ಡೇ ಬಮ್ಸ್ ಸರಿಯಾಗಿ ಕೊಟ್ಟು ಆಮೇಲೆ ಅವನಿಗೆ ಇನ್ನೊಮ್ಮೆ ಶುಭಾಶಯ ಹೇಳಿ ಎಲ್ಲ ಹರಟುತ್ತಾ ಕುಳಿತರು. ಹಾಗೆ ಮನುವಿನ ಗಮನ ಅಲ್ಲೇ ಇದ್ದ ಕಿಲ ಕಿಲನೆ ನಗುವ ಗುಂಪಿನೆಡೆಗೆ ಹೋಯಿತು, ಚಂದಿರನ ತುಂಡೊಂದು ಭೂಮಿಗೆ ಬಂದಂತೆ ಗಮನ ಸೆಳೆದಳು ಅವಳು, ಅಪ್ಸರೆಯಂತೆ ಕಂಡ ಅವಳೆದುರು ಇಡೀ ಗುಂಪೇ ಕ್ಷೀಣಿಸಿ ಅವಳೊಬ್ಬಳೇ ಕಾಣಿಸತೊಡಗಿದಳು ಮನುಗೆ, ಬಳ್ಳಿಯಂತೆ ಬಳುಕುವ ಅವಳ ಮುಂಗುರುಳು, ನೋಡಿದವರು ಅವಳ ಕಂಗಳಲ್ಲೇ ಕಳೆದು ಹೋಗುವಷ್ಟು ಗಾಢವಾದ ಕಣ್ಣುಗಳು, ತುಸು ಹೆಚ್ಚೇ ಎನ್ನುವಷ್ಟು ಕಾಡಿಗೆ ಇಂದ ಲೇಪಿತವಾಗಿವೆ ರೆಪ್ಪೆಗಳು, ದಾಳಿಂಬೆಯಂತಹ ಶುಭ್ರ ದಂತಪಂಕ್ತಿ, ಕಾಮನಬಿಲ್ಲಿನಂತಹ ಹುಬ್ಬುಗಳು, ಹಂಸದ ನಡಿಗೆಯ ಅವಳನ್ನು, ತಿನ್ನುವಂತೆ ನೋಡುತ್ತಿದ್ದ ಮನುವನ್ನು ಅವಳು ಗಮನಿಸಿದಳು, ಅವಳ ನೋಟ ತನ್ನೆಡೆ ಸೋಕುತ್ತಿದ್ದ ಹಾಗೆ, ಶುಭ್ರ ತಿಳಿನೀರ ಸಾಗರದಲ್ಲಿ ಚಂದ್ರ ಇಣುಕಿದಂತೆ, ಅವಳು ತನ್ನ ಹೃದಯ ಇಣುಕಿದ ಭಾಸವಾಯಿತು ಮನುಗೆ. ತಾನು ಬಂದಿರುವ ಕೆಲಸ ಮರೆತು ಅವಳನ್ನು ಕಣ್ತುಂಬಿಕೊಳ್ಳುವುದರಲ್ಲೇ ಮಗ್ನವಾದನು ಮನು.
ಹೇಗೋ ಅವಳ ಹೆಸರು ಶಿಲ್ಪಾ ಎಂದು ತಿಳಿದುಕೊಂಡ ಮನು, ಅವಳಾರೆಂದು ಕಾರ್ತಿಕ್ನ ಕೇಳಿ ಪರಿಚಯ ಮಾಡಿಸುವಂತೆ ದುಂಬಾಲು ಬಿದ್ದನು. ಅವಳು ತನ್ನ ಕಸಿನ್ ಎಂದು ಕಾರ್ತಿಕ್ ಪರಿಚಯ ಮಾಡಿಸಿದನು. ಹಾಗೆಯೇ ಬರ್ತ್‌ಡೇ ಫಂಕ್ಶನ್ ಮುಗಿದು ಎಲ್ಲರೂ ಹೊರಡಲು ಅನುವಾಗಲು ಮನು ಧೈರ್ಯ ಮಾಡಿ ಅವಳ ಬಳಿ ಹೋಗಿ ನಂಬರ್ ಕೇಳಿದನು, ಅವಳು ಏಕೆ ಕೊಡಬೇಕು ಎಂದು ಕೇಳಿ, ಹೊರಟು ಹೋದಳು. ಮನು ಬೇಸರದಿಂದ ಗೆಳೆಯರೊಂದಿಗೆ ರೂಮ್‌ಗೆ ಬಂದನು.
ಹಾಗೆಯೇ ಕೆಲದಿನಗಳ ನಂತರ ಫೇಸ್ಬುಕ್ನಲ್ಲಿ ಅವಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದನು, ಅವಳು ಆಕ್ಸೆಪ್ಟ್ ಮಾಡಿದ ಮೇಲೆ, ಅವಳು ಆನ್‌ಲೈನ್ ಇದ್ದಾಗಲೆಲ್ಲಾ ಚಾಟಿಂಗ್ ಶುರು ಹಚ್ಚಿದ, ಮತ್ತೆ ಕೆಲ ದಿನಗಳ ನಂತರ ಅವಳ ನಂಬರ್ ಪಡೆದ ಮನು. ಆದರೆ ಕಾಲ್ ಮಾಡಲು ಹಿಂಜರಿದು ಸುಮ್ಮನಿದ್ದನು. ಆದರೆ ಅವನ ಮನಸ್ಸು ಮಾತ್ರ ಅವಳ ಗುಂಗಿನಲ್ಲೇ ತೇಲುತ್ತಲಿತ್ತು, ಕೊನೆಗೆ ಒಂದು ದಿನ ಕಾಲ್ ಮಾಡಿದ ಮನು, "ಹೆಲೋ ಯಾರು ಎಂದಿತು" ಆ ಕಡೆಯಿಂದ ಸುಮುಧುರ ಕಂಠ, "ಮನು ಹಿಯರ್" ಎಂದನು, "ಸಾರೀ ರಾಂಗ್ ನಂಬರ್" ಕಾಲ್ ಕಟ್ಟಾಯಿತು. ಹೊಟ್ಟೆಯಲ್ಲಿ ಬಿದ್ದ ಬೆಂಕಿಗೆ ದಹಿಸಿದ ಮನು ಕೆಲ ಹೊತ್ತು ಸುಮ್ಮನೆ ಕುಳಿತ, ನಂತರ ಫೇಸ್ಬುಕ್ನಲ್ಲಿ ಮೆಸೇಜ್ ಮಾಡಿದನು "ರಾಂಗ್ ನಂಬರ್" ಎಂದು. ಕೊನೆಗೆ ಶಿಲ್ಪಾಳಿಂದಲೇ ಕಾಲ್ ಬಂದಾಗ ಮನುವಿನ ಮನ ತಣಿಯಿತು.
ಅಂದಿನಿಂದ ಪ್ರತಿದಿನವೂ ಮನು ಶಿಲ್ಪಾಗೆ ಮೆಸೇಜ್, ಕಾಲ್ ಮಾಡಲು ಶುರುವಿಟ್ಟನು. ಮನುವಿನ ಹೃದಯ ಲಬ್ಡಬ್ ಬಿಟ್ಟು ಶಿಲ್ಪಾಳ ಧ್ಯಾನದಲ್ಲಿ ತೊಡಗಿತು. ಜೊತೆಜೊತೆಗೆ ಮನು ತನ್ನ ಪ್ರೀತಿಯ ಕನಸಿನ ಸೌಧವ ಕಟ್ಟಲು ಶುರು ಮಾಡಿದನು, ಆದರೆ ಅವನಿಗೇನು ಗೊತ್ತು ಪ್ರೀತಿಯ ಸೌಧಕ್ಕೆ ಎರಡೂ ಹೃದಯಗಳ ಅಡಿಪಾಯ ಅತ್ಯವಶ್ಯಕವೆಂದು, ಒಂದೇ ಹೃದಯದ ಅಡಿಪಾಯದ ಮೇಲೆ ಕಟ್ಟಿದ ಪ್ರೀತಿ ಸಮಾಧಿಯಾಗಲು ಸಾಧ್ಯವೇ ಹೊರತು ಸೌಧವಲ್ಲ ಎಂಬ ಅರಿವು ಇನ್ನೂ ಮನುವಿಗೆ ತಿಳಿದಿಲ್ಲ. ಶಿಲ್ಪಾಳ ಒಂದೇ ಒಂದು ನಗುವನ್ನು ಕಾಣಲೆಂದೇ ಅವನು ಅವಳು ಸಂಚರಿಸುವ ದಾರಿಯಲ್ಲೇ ಸಂಚರಿಸ ತೊಡಗಿದನು, ಅವಳು ಇವನನ್ನು ನೋಡಿ ಒಂದು ಮುಗುಳ್ನಗು ಸೂಸಿದರೆ ಸಾಕು ದಿನವೆಲ್ಲಾ ಸಂತಸದಿಂದ ಕಳೆವುದು ಅವನಿಗೆ, ಅವಳೊಂದಿಗೆ ಒಂದು ದಿನ ಮಾತನಾಡದಿದ್ದರೆ ಏನೋ ಕಳೆದುಕೊಂಡವನಂತೆ ಆಗುವನು, ಅವಳು ಇವನ ಕಾಲ್ ರಿಸೀವ್ ಮಾಡದಿದ್ದರೆ ಅಥವಾ ಇವನ ಮೆಸೇಜ್ಗೆ ರಿಪ್ಲೈ ಬರದಿದ್ದರೆ ನೀರಿಲ್ಲದ ಮೀನಿನಂತೆ ಒದ್ದಾಡುವನು ಮನು. ಅವಳು ಇವನೊಂದಿಗೆ ಸ್ನೇಹದಿಂದಲೇ ಮಾತನಾಡುವಳು ಮತ್ತು ಸ್ನೇಹಿತನೆಂದೇ ಪರಿಗಣಿಸಿದವಳು ಶಿಲ್ಪಾ, ಆದರೆ ಮನುಗೆ ಮಾತ್ರ ಅವಳ ಮನಸ್ಸಿನಲ್ಲಿ ನಾನಿದ್ದೇನೆ ಎಂಬ ಕಲ್ಪನೆ, ಅದೇ ಅವನ ಮನಸ್ಸಿನ ಅಧಮ್ಯ ಆಸೆ ಕೂಡ. ಅವಳೊಂದಿಗೆ ಹೇಗೆ ವರ್ತಿಸಿದರೆ ತನ್ನನ್ನು ಅವಳು ಇಷ್ಟಪಡಬಹುದೆಂದು ಅವನು ಯೋಚಿಸುವನು, ಆದರೆ ನಿಜವಾದ ಪ್ರೀತಿಯೆಂಬುದು ವ್ಯಕ್ತಿಯನ್ನು ಅವನಿರುವ ಹಾಗೇ ನಿಜ ವ್ಯಕ್ತಿತ್ವವನ್ನು ಇಷ್ಟಪಡುವುದೇ ಹೊರತು ನಾಟಕೀಯ ವ್ಯಕ್ತಿತ್ವವನ್ನಲ್ಲ ಎಂಬ ಅರಿವಾಗಿ ಸುಮ್ಮನಿರುವನು.
ಹೀಗೆಯೇ ತಿಂಗಳುಗಳು ಉರುಳಿತು. ಕೊನೆಗೆ ಒಂದು ದಿವಸ ಎಲ್ಲಿಲ್ಲದ ಧೈರ್ಯ ತೋರಿ, ಅವಳಿಗೆ ತನ್ನ ಮನದಾಳದ ಮಾತುಗಳನ್ನು ತಿಳಿಸಲೇ ಬೇಕೆಂದು ನಿರ್ಧರಿಸಿ, ಅವಳಿಗೆ ತನ್ನ ಮನದಿಂಗಿತವನ್ನು ತಿಳಿಸಿಯೇ ಬಿಡುತ್ತಾನೆ, ಆದರೆ ಅವಳು ತನ್ನಲ್ಲಿ ಆ ತರಹದ ಯಾವುದೇ ಭಾವನೆಗಳಿಲ್ಲವೆಂದು ಮತ್ತು ಮನುವನ್ನು ಒಳ್ಳೆಯ ಸ್ನೇಹಿತನೆಂದು ಪರಿಗಣಿಸುವೆ ಎನ್ನುವಳು. ಇದ ಕೇಳಿದ ಮನು ಹೃದಯ ನುಚ್ಚು ನೂರಾದಂತೆ ಭಾಸವಾಗಿ, ಮನವು ಪಾತಾಳಕ್ಕೆ ಕುಸಿದು, ಕಣ್ಣಾಲಿಯು ತೇವವಾದವು.
ತನ್ನ ಪ್ರೀತಿಯ ಸೌಧವನ್ನು ಕ್ಷಣಾರ್ಧದಲ್ಲಿ ಸಮಾಧಿ ಮಾಡಿದ ಶಿಲ್ಪಾಳನ್ನು ಧ್ವೇಷಿಸಲೇ, ಅಥವಾ ಅವಳನ್ನು ಮನಃಪೂರ್ತಿ ಶಪಿಸಲೇ, ಅಥವಾ ಮುಂದಾಲೋಚನೆ ಮಾಡದೆ ತಾನು ಮಾಡಿದ್ದೆ ತಪ್ಪೇ ಒಂದೂ ಅರ್ಥವಾಗಲಿಲ್ಲ ಮನುಗೆ. ಅವಳಾದಾದ್ರೂ ತಪ್ಪೇನಿದೆ ಅವಳ ಕನಸಿನ ರಾಜಕುಮಾರ ಬೇರೆಯೇ ಇರಬಹುದಲ್ಲವೇ, ಅವಳ ಆಸೆ ಆಕಾಂಕ್ಷೆಯೇ ಬೆರೆಯಿರಬಹುದಲ್ಲವೇ. ಅವಳನ್ನು ದ್ವೇಷಿಸುವಂತ ತಪ್ಪು ಅವಳದೇನಿಲ್ಲ, ತನ್ನನ್ನೊಪ್ಪಲಿಲ್ಲ ಎಂಬ ಒಂದೇ ಕಾರಣಕ್ಕೆ ಅವಳನ್ನು ದ್ವೇಷಿಸುವದಾದರೆ ಅದು ಪ್ರೀತಿಯೇ ಅಲ್ಲ, ಏನೇ ಆದರೂ ಅವಳಿಗೆ ಒಳ್ಳೆಯದನ್ನು ಹಾರೈಸುವುದೇ ನಿಜ ಪ್ರೀತಿ, ಅವಳು ನೂರ್ಕಾಲ ಖುಷಿಯಿಂದ ಬಾಳಲಿ ಮತ್ತು ಅವಳ ಆಸೆಗಳೆಲ್ಲ ಈಡೇರಲಿ ಎಂದು ಹಾರೈಸುತ್ತಾ ಅವಳ ಸ್ನೇಹಿತನಾದರೂ ಆಗಿರುವೆ ಎಂದು ನಿರ್ಧರಿಸಿದ ಮನು ಕಣ್ಣಾಲಿಯನು ಒರೆಸುತ್ತಾ.
ನನ್ನೊಲವಿನ ನಂದಾದೀಪ ಹಚ್ಚುವ ಮೊದಲೆ ಆರುತಿದೆ
ನಿನ್ನ ಒಲುಮೆಯ ತೈಲವಿಲ್ಲದೆ ನನ್ನೆದೆ ವರ್ತಿಯು ದಹಿಸುತಿದೆ
ಇಲ್ಲದ ಕನಸನು ನನ್ನೆದೆ ಗೂಡಲಿ ವಿಧಿಯೆ ಏಕೆ ಮೂಡಿಸಿದೆ
ಪ್ರೀತಿಯೊ ಸ್ನೇಹವೊ ಈ ಬಂಧ ಚಿರಕಾಲವಿರಲಿ ಎಂದು ನಾ ಆಶಿಸಿದೆ.

No comments:
Post a Comment