Sunday, January 22, 2017

ಮಲೆನಾಡು ಡೈರಿ - 1

ಇವತ್ತು ಶನಿವಾರ ಆಫೀಸಿಗೆ ಹೋಗುವ ತಾಪತ್ರಯವಿಲ್ಲ ಮನುವಿಗೆ. ಬೆಳಿಗ್ಗೆ ಲೇಟಾಗಿ ಎದ್ದು ಪ್ರತಿವಾರದಂತೆ ಬಟ್ಟೆ ತೊಳೆದು ಒಣ ಹಾಕಿ ರೂಮ್ ಕ್ಲೀನ್ ಮಾಡಿ ನ್ಯೂಸ್ ಪೇಪರ್ ಓದುವುದರೊಳಗಾಗಿ ಮಧ್ಯಾಹ್ನ ಆಗಿತ್ತು.  ಊಟ ಮುಗಿಸಿ  ಎಲ್ಲ ಸೋಮಾರಿಗಳಂತೆ ಇನ್ನೇನು ಮಲಗಲು ಹೋದ ಮನು, ಆದರೆ ಎಂದಿನಂತೆ ಬೆಂಗಳೂರಿನ ಆಟೋ ರಿಕ್ಷಾಗಳ ಕಿರ್ರ್ ಕಿರ್ರ್ ಅನ್ನುವ ಸದ್ದು, ಬೀದಿ ನಾಯಿಗಳ ಬೋಗುಳುವಿಕೆ, ತರಕಾರಿಯವನ ಕೆಜಿ ಗೆ ೨೦ ಕೂಗು, ಹೀಗೆಯೇ ಒಂದೋ ಎರಡೋ, ಈ ಗಲಾಟೆಗಳ ನಡುವೆ ಅವನಿಗೆ ನಿದ್ರೆ ಹಾರಿ, ಚಿತ್ತ ಎತ್ತಲೋ ಇರುವ ತನ್ನ ಊರಿನತ್ತ ಹರಿಯಿತು.



ಪಶ್ಚಿಮಘಟ್ಟದ ಹಚ್ಚ ಹಸಿರನ್ನು ಹೊದ್ದು ಮಲಗಿರುವ ಊರು.  ಊರಿನ ಎಡ ಇಕ್ಕೆಲದಲ್ಲಿ ಆಗಸವನ್ನೇ ಚುಂಬಿಸುವ ಅಡಿಕೆ ತೋಟಗಳು, ಅಡಿಕೆ ಮರಗಳ ನಡುವೆ ನವಮಾಸ ತುಂಬಿದ ಹೆಣ್ಣಿನಂತೆ ಕಂಗೊಳಿಸುವ ಕೊನೆತೂಗಿ ನಿಂತ ಬಾಳೆ, ನಿನ್ನೆತ್ತರಕ್ಕೆ ನಾನು ಬರುವೆ ಎಂದು ಅಡಿಕೆ ಮರವನ್ನು ಆಲಿಂಗಿಸಿ ಬೆಳೆದ ಕಾಳುಮೆಣಸು ಬಳ್ಳಿ , ಅಲ್ಲಲ್ಲಿ ಕಂಪು ಸೂಸುವ ಏಲಕ್ಕಿ, ತೋಟದ ಮಧ್ಯ ವರ್ಷವಿಡೀ ನೀರಿನಿಂದ ಝುಳು ಝುಳಿಸುವ ನಡುಗಾಲುವೆ.  ಹಾಗೆಯೇ ಮುಂದೆ ಹೋದರೆ ಗಾಳಿಗೆ ಮೈದೂಗುವ ಭತ್ತದ ಪೈರನ್ನು ಹೊಂದಿರುವ ಗದ್ದೆಗಳು, ಮುಂದಿರುವುದೇ ಊರಿನ ಜೀವನಾಡಿ ಅಘನಾಶಿನಿ.
ಊರೆಂದರೆ ನೂರಾರು ಮನೆಗಳು ಬೇಕೆಂದೇನಿಲ್ಲ,  ಒಂದೇ ಒಂದು ಮನೆ ಇದ್ದರೂ ಅದು ಊರೇ, ನಾಲ್ಕು ಮನೆಗಳಿದ್ದರೂ ಊರೇ, ಈ ತಪ್ಪಲಿನಲ್ಲಿ.


ಇಂತಹ ಸೊಬಗಿನ ನಾಡಿನಲ್ಲಿ ಬದುಕುವ ಒಂದು ಚಿಕ್ಕ ಕುಟುಂಬ ಮನುವಿನದು. ಮನು ಈಗ 2 ತರಗತಿಯಲ್ಲಿ ಓದುತ್ತಿರುವ ಹುಡುಗ ಮತ್ತು ಅವನಿಗೆ ಪಂಚಪ್ರಾಣವಾದ ತಂಗಿ ನಕ್ಷತ್ರ ಈಗ ಅಂಬೆಗಾಳಿಡುವುದನ್ನು ಕಲಿತ್ತಿದ್ದಾಳೆ.  ಮನುವು ಎಲ್ಲೇ ಹೋದರೂ ತಂಗಿಯನ್ನು ತನ್ನೊಡನೆ ಕರೆದೊಯ್ಯವನು , ಗೋಲಿ ಆಡಲು ಹೋಗಲಿ, ಬುಗುರಿಯಾಡಲು ಹೋಗಲಿ, ತನ್ನ ಜೊತೆ ಅವಳಿರಲೇಬೇಕು.  ತೋಟ ಸುತ್ತಲು ಅಥವಾ ಊರು ತಿರುಗಲು ಹೋದರೂ ಅವಳನ್ನು ಒಟ್ಟಿಗೆ ಕರೆದೊಯ್ಯುವನು, ಅದಕ್ಕೇ  ಅಣ್ಣನಿದ್ದರೆ ಯಾರೂ ಬೇಡ ನಕ್ಷತ್ರಗೂ ಕೂಡ. ಆದರೆ ಅವಳನ್ನು ಊರು ಸುತ್ತಿಸಬೇಡ ಎಂದು ದಿನವೂ ಅಮ್ಮನ ಏಟೂ ಮಾಮೂಲಾಗಿತ್ತು ಮನುಗೆ. ನಕ್ಷತ್ರ ಸ್ಕೂಲ್ ಗೆ ಸೇರಿದ ನಂತರ ಇಬ್ಬರೂ ಒಟ್ಟಿಗೆ ಸ್ಕೂಲ್ ಗೆ ಹೋಗುವರು, ಬರುವರು. ಭಾನುವಾರದ ದಿನದಂದು ಮನೆಯಲಿ ಏನಾದರೂ ಚಿಕ್ಕಪುಟ್ಟ ಕೆಲಸ  ಹೇಳಿದರೆ ಮನುವಿಗೆ ಅಮ್ಮನೊಂದಿಗೆ ಜಗಳ ಮತ್ತು ಆ ಸಿಟ್ಟನ್ನು ಮನು ತೀರಿಸಿಕೊಳ್ಳುವುದು ನಕ್ಷತ್ರಳ ಮೇಲೆ, ಅವಳೊಂದಿಗೆ ಕಿತ್ತಾಡಿ. ಆದರೆ ಅವಳ ಕೋಪ ಕೇವಲ ಕ್ಷಣ ಕಾಲ ಮಾತ್ರ, ಮತ್ತೆ ಮನು ಇವತ್ತು ಭಾನುವಾರ ಶಕ್ತಿಮಾನ್ ಬರುವ ಹೊತ್ತು ಬಾ ಹೋಗೋಣ ಎಂದು ಪಕ್ಕದ ಮನೆಗೆ ಟಿವಿ ನೋಡಲು ಕರೆಯುವಳು. ಊರಲ್ಲಿ ಇದ್ದಿದ್ದೇ ಒಂದು ಟಿವಿ ಅದು ಡಿಡಿ ೧, ಅದರಲ್ಲೇ ಭಾನುವಾರದ ಮಧ್ಯಾನ್ಹದ ಕನ್ನಡ ಮೂವೀ , ಶುಕ್ರವಾರದ ಚಿತ್ರಮಂಜರಿ ನೋಡುವುದು ಇವರ ನೆಚ್ಚಿನ ಕಾಯಕ.




ಹೀಗೆಯೇ ಅವರ ದಿನಚರಿ ನಡೆಯುತ್ತಿರಲು, ಬೇಸಿಗೆ ರಜೆ ಬಂದಿತು. ಅಜ್ಜಿಯ ಮನೆಗೆ ಹೋಗುವ ಈ ಸಮಯಕ್ಕಾಗೆ ಕಾಯುತ್ತಿದ್ದರು ಇಬ್ಬರು. ೩೦-೪೦ ಕಿಮಿ ಹತ್ತಿರದಲ್ಲೇ ಇರುವ ಅಜ್ಜನ ಮನೆ, Typical  ಮಲೆನಾಡಿನ ಹಳೆಯ ಮನೆ ಮತ್ತು ಮನುವಿನ ಎಲ್ಲಾ ಮಾವಂದಿರು ಒಟ್ಟಿಗಿರುವ ಕೂಡು ಕುಟುಂಬ. ಮನೆಯ ಎದುರಲ್ಲೇ ಅಡಿಕೆ ಒಣಗಿಸಲು ಕಲ್ಲಿನ ಕಂಬದಿಂದ ಮಾಡಿದ ಚಪ್ಪರ. ಮನೆಯ ಮುಂಬದಿ ಎಲ್ಲರೂ ಕುಳಿತುಕೊಳ್ಳುವಷ್ಟು ಉದ್ದನೆಯ ಕಟ್ಟೆ. ಮನೆಯ ಮುಂಬಾಗ ಪೂರ್ತಿ ಕಿಟಕಿ, ನಡುವೆ ಎತ್ತರವಾದ ಮುಂಬಾಗಿಲು. ಹಾಗೆಯೇ ಒಳ ಹೋದರೆ ಕುಸುರಿಯ ಕೆತ್ತನೆಯುಳ್ಳ ಕಂಬಗಳಿಂದ ನಿಂತಿರುವ ಮುಚ್ಚಿಗೆಯ ಜಗುಲಿ. ಎದುರಿಗೆ ಸಾಲು ಸಾಲಾಗಿ ನಿಂತಿರುವ ದೇವರ ಫೋಟೋಗಳು.  ಆ ಫೋಟೋಗಳ ಹಿಂದಿನ ಖಾಲಿ ಜಾಗವೇ ಹಲವಾರು ಗುಬ್ಬಚ್ಚಿಗಳ ಗೂಡು. ಜಗುಲಿಯ ತುಂಬೆಲ್ಲಾ ಹಾರಾಡುವ ಗುಬ್ಬಚ್ಚಿಗಳು. ಎಷ್ಟೇ ಎತ್ತರದ ವ್ಯಕ್ತಿಯಾಗಲಿ ತಲೆಬಾಗಿಯೇ ನಡೆಯಬೇಕಾದ, ವಿವಿಧ ಚಿತ್ತಾರಗಳ ಕಲಾಕುಸುರಿಯ ಪ್ರಧಾನ ಬಾಗಿಲು, ಕೋಟೆಯ ಬಾಗಿಲಿನಸ್ಟು ದಪ್ಪನಾದ ಅದನ್ನು ತೆಗೆಯುವದು ಮತ್ತು ಹಾಕುವುದು ಚಿಕ್ಕ ಮಕ್ಕಳ ಕೈಲಾಗದ ಕೆಲಸ. ಜಗುಲಿಯ ಒಂದು ಕಡೆಯ ಗೋಡೆಯಲ್ಲಿ ಕಟ್ಟಿಗೆಯಿಂದ ಮಾಡಿದ ಬಿಲ್ಗುಟಗಳು (Hangers), ಅದರಲ್ಲೇ ತೂಗುನೆರಿದ ದೊಣ್ಣೆಗಳು( ಕಳ್ಳ ಕಾಕರಿಂದ ರಕ್ಷಣೆಗೆ), ಮತ್ತು ದ್ವಿನಳಿಗೆಯ ಬಂದೂಕು. ಗೋಡೆಯ ಇನ್ನೊಂದು ಕಡೆ ಗಂಟೆಗೊಮ್ಮೆ ಢಣಢಣ ಎಂದು ಶಬ್ದ ಮಾಡುವ ದೊಡ್ಡದಾದ ಪೆಂಡುಲಂ ಗಡಿಯಾರ.  ಜಗುಲಿಯ ಎರಡು ಕಡೆಯ ಗೋಡೆಯಲ್ಲಿ ಕಪಾಟುಗಳು. ಹಾಗೆಯೇ ಒಳಗೆ ಹೋದರೆ ಕಗ್ಗತ್ತಲಿನ ಒಳ ಕೋಣೆ, ಪಕ್ಕದಲ್ಲಿ ದೇವರ ಮನೆ, ಅಲ್ಲೇ ಇರುವ ದೊಡ್ಡದಾದ ಪೀಠಾರಿ.  ಮುಂದಿರಿವುದೇ ಅಡುಗೆಮನೆ. ಕೊನೆಯಲ್ಲಿ ಕಟ್ಟಿಗೆಯ ಗಡಗಡೆ ಹೊಂದಿರುವ ಬಾವಿ, ಪಕ್ಕದಲ್ಲಿ ಭತ್ತದ ಪಳತ.



ಅಜ್ಜನ ಮನೆಗೆ ಹೋಗುವುದೆಂದರೆ ಮನು ಮತ್ತು ನಕ್ಷತ್ರ ಇಬ್ಬರಿಗೂ ಖುಷಿಯೇ ಏಕೆಂದರೆ ಅಲ್ಲಿರುವ ಮಕ್ಕಳ ಸೈನ್ಯವೇ ದೊಡ್ಡದು, ಮತ್ತು ರಜೆಗೆ ಬರುವ ಎಲ್ಲಾ ಸಹೋದರರು ಸೇರಿದರೆಂದರೆ ರಾಮನ ವಾನರ ಸೇನೆಯಂತೆ ಭಾಸವಾಗುತ್ತದೆ ದೊಡ್ಡವರಿಗೆ. ಇನ್ನು ಬೇಸಿಗೆ ರಜೆ ಮುಗಿಯುವ ತನಕ ಅವರೆಲ್ಲರ ಶಾಂತಿಗೂ ರಜೆಯೇ. ದೊಡ್ಡವರಿಗೆ ಒಂದೇ ಒಂದು ನೆಮ್ಮದಿಯ ನಿಟ್ಟುಸಿರೆಂದರೆ ದನ ಕಾಯುವ ಕೆಲಸ ಮಕ್ಕಳಿಗೆ ವಹಿಸುವುದು. ಬೆಳಿಗ್ಗೆ ಎದ್ದು ಅಜ್ಜಿ ಕೊಡುವ ತಿಂಡಿ ತಿಂದು, ಅಜ್ಜಿಯ ಕಲ್ಲು ಸಕ್ಕರೆ, ಒಣ ದ್ರಾಕ್ಷಿ ಜೊತೆಗೆ ಪ್ರೀತಿಯ ಸವಿ ಮುತ್ತನ್ನು ಪಡೆದು, ಮನು ಮತ್ತು ನಕ್ಷತ್ರ ತಮ್ಮ ಸಹೋದರರ ಜೊತೆಗೂಡಿ ಹೊರಡುವರು. ರಜೆಗೆಂದು ಬರುವ ಈ ಮೊಮ್ಮಕ್ಕಳನ್ನು ನೋಡಿದರೆ ಅಜ್ಜಿಗೂ ತುಸು ಪ್ರೀತಿ ಹೆಚ್ಚೇ. ದನ ಮೇಯಿಸಲು ಹೋದ ಇವರಿಗೆ ಜೀರುಂಡೆ ಹಿಡಿದು ಬೆಂಕಿ ಪಟ್ಟಣದಲ್ಲಿ ಹಾಕಿ, ಅದರ ಜೊತೆ ಚೆಂಡು ಹೂವಿನ ಸೊಪ್ಪು ಹಾಕಿಕೊಡುವರು ಇವರ  ಸಹೋದರರು. ತೋಟದಲ್ಲಿರುವ ಗೋಡಂಬಿ ಬೀಜಗಳನ್ನು ಕಿತ್ತು ಕಿಸೆ ತುಂಬಿಸಿಕೊಳ್ಳುವರು. ಎಳನೀರು, ಎಳೆಕೊಬ್ಬರಿ ತಿಂದು ನಲಿಯುವರು ಎಲ್ಲರೂ, ಹೊಲದಲ್ಲಿ ಬೆಳೆದ ಹಸಿಗಡಲೆ, ಎಳೆಹೆಸರು ತಿಂದು ತೇಗುವರು.  ಮನೆಗೆ ಬಂದು ಅಜ್ಜಿಗೆ ದಿನದ ಎಲ್ಲ ಪ್ರವರವನ್ನು ಹೇಳಿ ಕಲ್ಲು ಸಕ್ಕರೆ ಮತ್ತು ಸಿಹಿ ಮುತ್ತು ಗಿಟ್ಟಿಸುವರು.
ಹೀಗೆಯೇ ಎರಡು ತಿಂಗಳ ಬೇಸಿಗೆ ರಜೆ ನಿಮಿಷದಂತೆ ಮರೆಯಾಗಿ, ಮನು ಮತ್ತು ನಕ್ಷತ್ರ ಳನ್ನು ಊರಿಗೆ ಕರೆದೊಯ್ಯಲು ಅವರ ತಂದೆ ಆಗಮಿಸಿದರು. ಇಬ್ಬರು ಊರಿಗೆ ಹೋಗಲು ರೆಡಿಯಾಗಿ ಅಜ್ಜಿಯ ಆಶೀರ್ವಾದ ತೆಗೆದುಕೊಂಡು ಅಪ್ಪನ ಜೊತೆ ಹೊರಟರು.
ಬೇಸಿಗೆ ರಜೆಯನ್ನು ಅಜ್ಜನ ಮನೆಯಲ್ಲಿ ಕಳೆದು ಇನ್ನೇನು ಊರಿಗೆ ಬರುವ ಹೊತ್ತಿಗಾಗಲೇ  ಮಳೆರಾಯ ತನ್ನ ಪರ್ವಕಾಲದ ಆರಂಭವನ್ನು 

ಸೂಚಿಸಲೆಂಬಂತೆ ಗುಡುಗು ಸಿಡಿಲುಗಳ ಆರ್ಭಾಟದೊಂದಿಗೆ ಮೊದಲ ಹನಿಯನ್ನು ಭೂಮಿಗೆ ಸುರಿಸಿದನೆಂದರೆ ಆಹಾ  

ಆಘ್ರಾಣಗಳಿಗೆಲ್ಲ ಹಬ್ಬ. ಭೂಮಿತಾಯಿಯು ಎಷ್ಟೋ ದಿನಗಳ ತನ್ನ ಆ ದಾಹವನ್ನು ಮೊದಲ ಬಾರಿ ತಣಿಸಿಕೊಳ್ಳುವ ಆ ಕ್ಷಣದಲ್ಲಿ 

ಹೊಮ್ಮಿಸುವ ಆ ಸುಗಂಧ ಎಲ್ಲೂ ಸಿಗಲಾರುದು. ಇನ್ನೂ ಒಂದೆರಡು ವಾರಗಳನ್ನು ಹೀಗೆ ಬಿಸಿಲು ಮಳೆಯ ಕಣ್ಣಾಮುಚ್ಚಾಲೆ ಆಟದಲ್ಲಿ 

ಕಳೆಯುವದರೊಳಗಾಗಿ ಶಾಲೆ ಪ್ರಾರಂಭವಾಯಿತು.

ಮುಂದುವರೆಯುವುದು..............



Saturday, January 21, 2017

ತೀರದ ದಾಹ

ಕಾಡ ಅಳಿಸಿ ನಾಡ ಬೆಳೆಸಿ , ವನ್ಯಕುಲವ ನಶಿಸಿ ಮನುಕುಲವ ಬೆಳೆಸೆ
ತೀರದೆ ನಿನ್ನ ದಾಹ
ಹರಿವ ತೊರೆಯ ತಡೆಸಿ, ಉಸಿರ ಹಸಿರ ಮುಳುಗಿಸೆ,
ತೀರದೆ ನಿನ್ನ ದಾಹ
ಭುವಿಯ ಬಗೆಸಿ ಅದಿರ ತೆಗೆಸಿ, ತಾಯಿಯೊಡಲಾಳವನು ಕೊರೆಸಿ, ಜೀವಜಲವ ಹೀರೆ
ತೀರದೆ ನಿನ್ನ ದಾಹ
ನಿನ್ನೀ ದಾಹಕೆ ಭುವಿಯು ದಹಿಸುವುದ ನೋಡ
ಭುವಿಗೆ ತಂಪ ನೆರೆಯುವುದ ಬಿಟ್ಟು ಪರಗ್ರಹವ ಶೋಧಿಸುತಿರುವೆಯಲ್ಲೋ ಮೂಢ
ತೀರದೆ ನಿನ್ನ ದಾಹ!

Wednesday, January 11, 2017

ಹನಿಗವನಗಳು

ಹೃದಯದ ಮಿಡಿತ :

ಚಂದಿರನು ನಾಚಿ ಮೋಡದ ಮರೆಯಲಿ ಅಡಗಿದ ನಿನ್ನ ಮೊಗಕಾಂತಿಯ ಕಂಡು
ಬೀಸುವ ಗಾಳಿಯ ಅಲೆ ದ್ವಿಗುಣವಾಯಿತು ನಿನ್ನ ನಗುವಿನಲೆಯ ಕಂಡು
ತಾರೆಗಳ ಸೊಕ್ಕಡಗಿತು ನಿನ್ನ ಕಣ್ಣ ಹೊಳಪನು ಕಂಡು
ಬಡಪಾಯಿ ಈ ಹೃದಯದೇನಿದೆ ತಪ್ಪು ಪ್ರೀತಿಯ ತಂತಿ ಮೀಟುವದರಲ್ಲಿ ನಿನ್ನ ಸೊಗಸನು ಕಂಡು.

ಪ್ರೀತಿಯೊ ಸ್ನೇಹವೊ :

ನನ್ನೊಲವಿನ ನಂದಾದೀಪ ಹಚ್ಚುವ ಮೊದಲೆ ಆರುತಿದೆ
ನಿನ್ನ ಒಲುಮೆಯ ತೈಲವಿಲ್ಲದೆ ನನ್ನೆದೆ ವರ್ತಿಯು ದಹಿಸುತಿದೆ
ಇಲ್ಲದ ಕನಸನು ನನ್ನೆದೆ ಗೂಡಲಿ ವಿಧಿಯೆ ಏಕೆ ಮೂಡಿಸಿದೆ
ಪ್ರೀತಿಯೊ ಸ್ನೇಹವೊ ಈ ಬಂಧ ಚಿರಕಾಲವಿರಲಿ ಎಂದು ನಾ ಆಶಿಸಿದೆ.

Friday, January 6, 2017

ಮನಸ್ಸೆಂಬ ಮರ್ಕಟ

ಆಫೀಸಿನಲ್ಲಿ ಕೂತು ಕೀಬೋರ್ಡ್ನ ಠಕ ಠಕ ಟಂಕಿಸುತ್ತಾ ಬರೆದ Java ಕೋಡ್ ಬೇಕಾದಂತೆ ಕೆಲಸ ಮಾಡದಿರಲು ಸುಸ್ತಾಗಿ ಸಮಯ ನೋಡಿದರೆ 4 ಘಂಟೆ,  ಇಂದು ಶುಕ್ರವಾರ ಊಟಿಗೆ ಬೈಕ್ ರೈಡ್ ಪ್ಲಾನ್ 15 ದಿವಸ ಮುಂಚೆಯೇ ಆಗಿತ್ತು.  ಅದರ ನೆನಪಿನಲ್ಲೆ laptop shutdown ಮಾಡಿ ಮನೆಯ ಕಡೆ ಹೊರಟೆ. 

ಮನೆಯಲ್ಲಾಗಲೇ ನನ್ನವಳು ಆಫೀಸಿನಿಂದ ಬಂದು ಪ್ರಯಾಣದ ತಯಾರಿಯಲ್ಲಿ ತೊಡಗಿದ್ದಳು. ಹಾಗೆಯೇ ಅವಳ ಕೆನ್ನೆಯನ್ನು ಚುಂಬಿಸಿ ನಾನು ಫ್ರೆಷಪ್ ಆಗಲು ಬಾತ್ರೂಮ್ ಕಡೆ ಹೋದೆ. ಹಾಗೆಯೇ ಮುಖ ತೊಳೆಯುತ್ತಾ ನೆನಪಿನ ಬುತ್ತಿ ತೆರೆದುಕೊಂಡಿತು.

ಯಾವುದೋ ಚಾಣಾಕ್ಷ ಶಿಲ್ಪಿ ತನ್ನ ಜೀವನ ಕಾಲವನ್ನೇ ಮುಡಿಪಾಗಿಟ್ಟು ಕೆತ್ತಿ ಕೆಡೆದಂತಹ ಮುಖಾರವಿಂದ, ಕ್ಷೀರಸಾಗರದಲ್ಲೇ ಅದ್ದಿ ತೆಗೆದಂತಹ ಮೈಬಣ್ಣ, ಬೀಸುವ ಗಾಳಿಗೆ ಆಚಿಂದೀಚೆ ಹೊಯ್ದಾಡುವ ಕೇಶವೃಕ್ಷ, ಇದೆಲ್ಲಾ ಸಾಲದೆಂಬತೆ ಹರಳುಗಳ ರಾಶಿಯಲ್ಲೇ ಅದ್ದಿ ತೆಗೆದ ಅವಳುಟ್ಟ ಆ ಗುಲಾಬಿ ಬಣ್ಣದ ಉಡುಗೆ, ಭ್ರೂಮಧ್ಯದಲ್ಲಿ ಮಿನುಗುವ ತಾರೆಯಂತಹ ಬಿಂದಿ. ಇಷ್ಟೊಂದು ಶೃಂಗಾರಭರಿತವಾಗಿ ಗರಿಬಿಚ್ಚಿದ ನವಿಲಿನಂತೆ ಅವಳು ಬರುತ್ತಿರಲು ನೋಡಿದ ಹುಡುಗರೆಲ್ಲಾ ಸ್ತಭ್ದರಾಗಿ ಅವಳನ್ನೆ ನೋಡುತ್ತಲೇ ಇದ್ದರು, ಅದರಲ್ಲಿ ನಾನೂ ಒಬ್ಬ. ಇವಳನ್ನು ಕೈ ಹಿಡಿದವನೆ ಧನ್ಯ ಎಂದಿತ್ತು ಮನಸ್ಸು.

ಇಂದು ಅವಳೇ ನನ್ನ ಬಾಳಸಂಗಾತಿ. ಮದುವೆಯಾಗಿ ಇಂದಿಗೆ ವರುಷವಾಯಿತು.  ಮೊದಲನೇ ವರ್ಷದ ಸಂಭ್ರಮ ಸವಿಯಲು ಊಟಿಗೆ, ಅದೂ ನನ್ನ ಇಷ್ಟದ ಬೈಕ್ ರೈಡ್ ನಲ್ಲಿ ಅವಳೊಂದಿಗೆ ಪಯಣದ ಸಿದ್ಧತೆ ನಡೆದಿದೆ. ಮದುವೆ ಆದ ಹೊಸತರಲ್ಲಿ ನನ್ನ ಬೈಕ್ ಹಿಂದೆ ಕೂರಲು ಹೆದರುತ್ತಿದ್ದ ಅವಳು ಇಂದು ಬುಲೆಟ್ ರೈಡರ್, ಆ ಸಂಪೂರ್ಣ ಕೀರ್ತಿ ಮತ್ತು ಅದಕ್ಕಿಂತ ನೂರಾರು ಪಟ್ಟು ಹರುಷ ನನ್ನದು.

ಮುಂಜಾನೆಯ ಮಂಜಿನಲ್ಲಿ ಬೈಕ್ ನಲ್ಲಿ ಬಿಗಿದಪ್ಪಿ ಹೊರಟ ಈ ಜೋಡಿಹಕ್ಕಿಗಳನ್ನು ತಿರು ತಿರುಗಿ ನೋಡುವ ಜನರ ಮುಖವನ್ನು ನೋಡಿದಾಗಲೇ ಗೊತ್ತಾಗಿದ್ದು ಸ್ವರ್ಗಕ್ಕೆ ಕಿಚ್ಚು ಹಚ್ಚುವುದು ಎಂದರೆ ಇದೇ ಎಂದು. ( ಸ್ವಗ೯ಕ್ಕಲ್ಲದಿದ್ದರೂ ನೋಡುವ ಜನರ ಹೊಟ್ಟೆಗೆ).

"ವೀಕೆಂಡ್ ಬಂತು ಅಂದ್ರೆ ಸಾಕು ರಾತ್ರಿಯೆಲ್ಲಾ ಕುಡಿದು ಗಲಾಟೆ ಮಾಡ್ತೀರಾ, ಹೀಗೆ ಆದ್ರೆ ರೂಮ್ ಖಾಲಿ ಮಾಡಿಸ್ತೀನಿ" ಅಂತ ಯಾರೋ ಕೂಗೋದ ಕೇಳಿ ಕಣ್ಣು ಬಿಟ್ಟು ನೋಡಿದರೆ ಅಯ್ಯೋ ಇಷ್ಟೊತ್ತು ಕಂಡದ್ದೆಲ್ಲಾ ನಿನ್ನೆ ರಾತ್ರಿ ಫುಲ್ ಬಾಟಲ್ ಇಫೆಕ್ಟ್.  ಥೂ ಅಂತ ನನ್ನ ರೂಮ್ ಮೇಟ್ಗೆ ಬೈಕೊಂಡು ನಾಷ್ಟಾ ಮಾಡೋಕೆ ಹೋದ್ವಿ.