Thursday, September 28, 2023

ಅಮ್ಮ ಈಗ ಬರೀ ನೆನಪು !!!

ಅದ್ಯಾವುದೋ ಸಿನೆಮಾದಲ್ಲಿ ಒಂದ್ ಕತೆ ಕೇಳಿದ ನೆನಪು, ಮಗ ತಾಯಿನ ಕೊಂದು ಅವ್ಳ ಹೃದಯಾನ ಕೈ ಲಿ ತಗೊಂಡ್ ಹೋಗೋವಾಗ ಎಡವ್ತನೆ ಆಗ ತಾಯಿ ಹೃದಯ ಹುಷಾರು ಮಗ ಬೀಳ್ತಿಯ ಅನ್ನುತ್ತಂತೆ. ಅಂದ್ರೆ ತಾಯಿಗೆ ಮಕ್ಳು ಬಗ್ಗೆ ಅಷ್ಟು ಪ್ರೀತಿ, ಅವ್ರು ಎಂತಾ ಮಕ್ಕಳೇ ಆಗ್ಲಿ ಅವ್ರು ಏನೇ ಮಾಡಿದ್ರೂ ತಾಯಿ ಪ್ರೀತಿ ಅವ್ರ ಬಗ್ಗೆ ಕಡಿಮೆ ಆಗಲ್ಲ.
ನಾನು ನಮ್ಮಣ್ಣ  ಸಣ್ಣವರಿದ್ದಾಗ  ಎಷ್ಟು ಗೋಳು ಹೊಯ್ಕಿಂಡಿದಿವಿ ಅಂತ ಇವತ್ತು ಗೊತ್ತಾಗುತ್ತೆ ನಂಗೆ.
ಹಾಸಿಗೆ ಹಾಸಿ ಕೊಡು ಬಾ ಅಮ್ಮ,
ಚದ್ದರ್ ಹೊಚ್ಚು ಬಾರಮ್ಮ,
ತಲೆ ತಟ್ಟಿ ಮಲಗಿಸು ಬಾರಮ್ಮಾ,
ಟಾಯ್ಲಟ್ಟಿಗೆ ಕರ್ಕೊಂಡ್ ಹೋಗು ಬಾರಮ್ಮ
ಹಿಂಗೆ ಅಮ್ಮ ಇಲ್ದೆ ಊಟ, ತಿಂಡಿ, ನಿದ್ದೆ , ಟಾಯ್ಲೆಟ್ ಏನು ಆಗ್ತಿರಲಿಲ್ಲ. ಇವತ್ತು ಒಬ್ಬ ಮಗನ್ನ ನೋಡಿಕೊಳ್ಳೋದೆ  ಸಾಕಾಗಿ ಹೋಗುತ್ತೆ ನಮಗೆ.

ಫೋನ್ ಮಾಡಿದ್ರೆ ಮೊದ್ಲು ಕೇಳೋ ಮಾತೇ ಊಟ ಸರಿ ಮಾಡು, ನಿದ್ದೆ ಸರಿ ಮಾಡು ಅಷ್ಟೇ. ಬೇರೆ ಯಾವುದೂ ಅವ್ಳಿಗೆ ಬೇಡ ಮಕ್ಳು ಊಟಾ ತಿಂಡಿ ಮಾಡ್ಕೊಂಡ್ ಆರಾಮ ಆಗಿ ಇರ್ಬೇಕು ಅಷ್ಟೇ ಅವ್ಳ ಆಸೆ.
COVID ಆದ್ಮೇಲೆ ವರ್ಕ್ ಫ್ರಮ್ ಹೋಂ ಇದ್ದಾಗ, ಯಾವಾಗ್ಲೂ ಬಂದು ಹಪ್ಪಳ ಸುಟ್ಟು ತುಪ್ಪ ಹಾಕಿ ಕೊಡ್ಲಾ, ಬೆಣ್ಣೆ ಹಾಕಿ ಕೊಡ್ಲಾ ಇದೆ ಅಂತ ಇಡೀ ದಿವ್ಸ ಕೇಳೋದೇ ಕೆಲ್ಸ.
ಹುಷಾರಿಲ್ಲ ಜ್ವರ ಬಂತು ಅಂದ್ರೆ ದೇವ್ರ ಬಸ್ಮ ಹಚ್ಚಿ ದೇವ್ರೆ ನನ್ ಮಗನ್ನ ಬೇಗ ಹುಷಾರ್ ಮಾಡಪ್ಪ ಅಂತ ಕೇಳೋವ್ಳು ನಮ್ಮಮ್ಮ.
ಮೊನ್ನೆ 26ನೇ ತಾರೀಖು ಸಂಜೆ ಸಡನ್ನಾಗಿ ನನ್ ಕಸಿನ್ ಬ್ರದರ್ ಫೋನ್ ಮಾಡಿ ಎಲ್ಲಿದಿಯ ಊರ ಕಡೆ ಹೋರ್ಡು ಅಂತಿದಾನೆ, ಇವ್ನಿಗೆ ಏನಾಯ್ತು ! ಮೊದ್ಲು ಏನಾಯ್ತು ಹೇಳು ಅಂದೆ.  ನಿಮ್ಮಮ್ಮ ಹೋದ್ರು ಅಂದ.
ಹೋದ್ರಾ ಯಾಕೆ ಏನಾಯ್ತು ಅಂದೆ ನಾನು.  ಇಲ್ಲ cardiac ಅರೆಸ್ಟ್ ,  ಅಸ್ಪತ್ರೆಲಿ ಡಾಕ್ಟರ್   ಮನೇಲೇ ಪ್ರಾಣ ಕಳೆದುಕೊಂಡಿದ್ದಾರೆ ಅಂದ್ರು ಅಂತ ಹೇಳ್ದ.
ಗಣೇಶ ಚತುರ್ಥಿಗೆ ಊರಿಗೆ ಹೋದವನು ಒಂದು ವಾರ ಇದ್ದು  ವಾಪಾಸ್ ಬಂದಿದ್ದೆ. ಬಂದು ಎರಡೇ ದಿನದಲ್ಲಿ ನಮ್ಮಮ್ಮ ನಮ್ಮನ್ನೆಲ್ಲಾ ಬಿಟ್ಟು  ಹೋಗಿದ್ದಾಳೆ. 

ಊರಿಗೆ ಬಂದು ನಮ್ಮಮ್ಮನ ಕಾರ್ಯ ಎಲ್ಲ ಮುಗ್ಸಿ ಆಯ್ತು. ಮೂರು ದಿವಸದ ಕಾರ್ಯ ಮುಗಿದ ಮೇಲೆ ಎಲ್ಲ ನೆಂಟರೂ ಹೋಗಿ ಮನೆಯವರ ಅಷ್ಟೇ ಉಳಿದಾಗ ಗೊತ್ತಾಗುತ್ತೆ ಮನೆ ಯಾಕೋ ಬಣ ಬಣ ಗುಟ್ಟುತ್ತ್ತಿದೆ ಅಂತ. ಇಡೀ ಮನೆ ತುಂಬಾ ಓಡಾಡಿಕೊಂಡು ಎಲ್ಲ ಕೆಲ್ಸನು ತಾನೇ ಮಾಡುತ್ತಿದ್ದ ಅಮ್ಮ ಎಲ್ಲಿ ಹೋದ್ಲು ಅಂತ , ಇಷ್ಟು ಆಕಸ್ಮಿಕವಾಗಿ ಹೇಗೆ ಹೋದ್ಲು ಅಂತ 😥. 

ಜೀವನದಲ್ಲಿ ಯಾರೇ ಬಂದ್ರು ನನ್ನಮ್ಮನಷ್ಟು  ಪ್ರೀತಿ ಕೊಡೋಕೆ ಯಾರಿಂದಲೂ ಸಾಧ್ಯ ಇಲ್ಲ 😥.
ಎರಡು ತಿಂಗಳ ಹಿಂದೆ ಯಾರೋ ನೆಂಟರ ಮನೆ ಮದ್ವೆಗೆ ಹೋದಾಗ ಎಲ್ಲರಿಗೂ ನನ್ನ ಮೊಮ್ಮಗನ ಚೌಲ ಮಾಡ್ತೀವಿ ಎಲ್ರೂ ಬನ್ನಿ ಅಂತ ಕರೆದು  ಬಂದಿದ್ದಳಂತೆ ಈಗ ಅವ್ಳೆ ಇಲ್ಲ !!
ನಾನು  ವಯಸ್ಸಾಗಿ ,  ಹಾಸಿಗೆ ಹಿಡಿದು ನನ್ನ   ಮಕ್ಳು ಸೊಸೆ ಯಾರಿಗೂ ತೊಂದರೆ ಕೊಡಬಾರದು, ಗಟ್ಟಿ ಇದ್ದು ಕೆಲ್ಸ ಮಾಡ್ತಾನೆ   ಹಾರ್ಟ್ ಅಟ್ಟ್ಯಾಕ್ ಆಗಿ ತಕ್ಷಣ ಕಣ್ಣು ಮುಚ್ಚಿಕೊ ಬೇಕು ಅಂತ ಯಾವಾಗ್ಲೂ ಹೇಳ್ತಾನೆ ಇರ್ತಿದ್ಲು ನಮ್ಮಮ್ಮ, ಈಗ ಅದನ್ನೇ ನಿಜ ಮಾಡಿ ಹೋದ್ಲು. ತನ್ನ ಆಸೆ ಅಂತೇನೆ ಹೋದ್ಲು ನಮ್ಮಮ್ಮ.

ಎಲ್ಲಿದ್ದರೂ ಚೆನ್ನಾಗಿರಲಿ ನಮ್ಮಮ್ಮ, ಅಷ್ಟೇ ಕೇಳಿ ಕೊಳ್ಳೋಕೆ  ಸಾಧ್ಯ ಈ ಮಕ್ಕಳ ಹತ್ರ.