Friday, February 24, 2017

ಮಲೆನಾಡು ಡೈರಿ- 2

ಮನುವಿನ ತಂದೆ ನೀಲಕಂಠಯ್ಯನವರು ಚಿಕ್ಕ ಹಿಡುವಳಿದಾರರು, ತಮಗಿರುವ ಅಲ್ಪ ಜಮೀನಿನಲ್ಲೇ ಸತಿಪತಿ ಸೇರಿ, ಕಷ್ಟ ಪಟ್ಟು ದುಡಿದು, ಒಂದು ಚಿಕ್ಕ ಸೂರನ್ನು ಕಟ್ಟಿಕೊಂಡು ನೆಮ್ಮದಿಯ ಬದುಕು ಕಂಡವರು. ಎಲ್ಲ ಪೋಷಕರ ಹಾಗೆ ಅವರ ಮಹದಾಸೆ ತನ್ನ ಮಗ ಚೆನ್ನಾಗಿ ಓದಿ  ಸಮಾಜದಲ್ಲಿ ಒಳ್ಳೆಯ ಹುದ್ದೆ ಅಲಂಕರಿಸಲಿ ಎಂದು. ತಮಗೆ ಕಷ್ಟವಾದರೂ ಇಬ್ಬರೂ ಮಕ್ಕಳನ್ನು ಓದಿಸುವರು ಅವರು 

ಒಂದು ದಿನ ಇದ್ದಕ್ಕಿದ್ದ ಹಾಗೆ ತೋಟದಲ್ಲಿ ಕೆಲಸ ಮಾಡುವಾಗ ಕುಸಿದು ಬಿದ್ದರು ಅವನ ತಾಯಿ.
ಚಿಕ್ಕ ವಯಸಿನಲ್ಲೇ ಮದುವೆ ಆಗಿ ತನ್ನ ದೊಡ್ಡ ಕುಟುಂಬದಿಂದ ಇಲ್ಲಿಗೆ ಬಂದ ಹೆಣ್ಣು ಅವನ ತಾಯಿ ಕೌಸಲ್ಯ. ಅವರ ತಂದೆಯ ಕುಟುಂಬಕ್ಕೆ ಹೋಲಿಸಿದರೆ ನೀಲಕಂಠಯ್ಯನವರ ಕುಟುಂಬ ಚಿಕ್ಕದು ಮೂವರು ಸಹೋದರರು ಮತ್ತು ಒಬ್ಬಳೇ ಸಹೋದರಿ, ಹೇಳಿಕೊಳ್ಳುವಂತ ದೊಡ್ಡ ಸ್ಥಿತಿವಂತರೆನಲ್ಲ, ಇರುವುದರಲ್ಲೇ ಅಚ್ಚುಕಟ್ಟಾಗಿ ಜೀವನ ನಡೆಸಿಕೊಂಡು ಹೋಗುತ್ತಿರವವರು ನೀಲಕಂಠಯ್ಯನವರ ಅಪ್ಪ.  ಕೌಸಲ್ಯಾಳ ತಂದೆ ಊರಿಗೆ ದೊಡ್ಡ ಕುಳವೇ, ಹತ್ತಾರು ಎಕರೆ ಜಮೀನು, ತೆಂಗಿನ ತೋಟ, ಅಡಿಕೆಯ ತೋಟ, ಹಳೆಯ ಕಾಲದ ದೊಡ್ಡ ಮನೆ, ಅವರಿಗೆ 7 ಜನ ಗಂಡು ಮಕ್ಕಳು, ಮತ್ತು 2 ಹೆಣ್ಣು. ಕೌಸಲ್ಯಾ 5 ನೆಯವಳು.
ತಂದೆಯ ಮನೆಯಲ್ಲಿ ಆಡುತ್ತಾ ಬೆಳೆದ ಹುಡುಗಿಗೆ ಮೊದ ಮೊದಲು ನೀಲಕಂಠಯ್ಯ ನವರ ಮನೆಗೆ ಬಂದಾಗ ತುಸು ಕಷ್ಟವೇ ಆಯಿತು. ತಂದೆಯ ಮನೆಯಲ್ಲಿ ಬರೀ ಅಡುಗೆ ಮಾತ್ರ ಕಲಿತವಳು ಅವಳು, ಇಲ್ಲಿಗೆ ಬಂದ ಮೇಲೆ ತನ್ನ ಓರಗೆಯವರಂತೆ ಅಡುಗೆ ಮನೆ, ಕೊಟ್ಟಿಗೆಯ ದನಕರುಗಳ ಕೆಲಸ, ಗದ್ದೆ - ತೋಟದಲ್ಲಿ ಕಳೆ ಕೀಳುವುದು, ಅಡಿಕೆ ಸುಲಿಯುವುದು ಎಲ್ಲ ಹೊಸ ಕೆಲಸಗಳೇ ಆಕೆಗೆ. ಇನ್ನು ಬೇಸಿಗೆಯ ಬೆಳೆಗಳಾದ ಶೇಂಗಾ, ಹೆಸರು ಮುಂತಾದ ಕಾಳುಗಳ ಬೆಳೆವ ಸಮಯದಲ್ಲೂ ಮನೆಯ ಹೆಂಗಸರು ಕೈ ಜೋಡಿಸುತ್ತಿದ್ದರು. ಮದುವೆಯ ಹೊಸತರಲ್ಲಿ ಇವಳನ್ನು ಕೆಲಸಕ್ಕೆ ಅಷ್ಟೇನೂ ಕರೆಯುತ್ತಿರಲಿಲ್ಲವಾದರೂ, ವರ್ಷ ಕಳೆಯುವುದರೊಳಗೆ ತಾನೇ ಎಲ್ಲ ಕೆಲಸಗಳಲ್ಲೂ ಭಾಗಿಯಾಗತೊಡಗಿದಳು ಅವಳು.



ನೀಲಕಂಠಯ್ಯನವರ ತಂದೆಯ ನಿಧನದ ನಂತರ ಇವರು ಮಧ್ಯದ ಮಗನಾದರೂ ಮನೆಯ ಯಜಮಾನಿಕೆ ಇವರಿಗೇ ಬಂದಿತ್ತು, ಅದಕ್ಕೆ ಕಾರಣ ಇವರ ಅಣ್ಣ ಅಷ್ಟೇನೂ ಮನೆಯ ಕಡೆ ಜವಾಬ್ದಾರಿ ಬಗ್ಗೆ ತಲೆ ಹಾಕುತ್ತಿರಲಿಲ್ಲ, ಅವರಪ್ಪನೊಂದಿಗೆ ಎಲ್ಲ ಕೆಲಸಗಳಲ್ಲೂ ಭಾಗಿಯಾಗಿ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದುದು ನೀಲಕಂಠಯ್ಯನವರೇ, ಅವರೇ ತನ್ನ ಸಹೋದರಿ ಮತ್ತು ಎಲ್ಲ ಸಹೋದರರ ಮದುವೆ ಮಾಡಿ ಮುಗಿಸಿ ಕೊನೆಯಲ್ಲಿ ಕೌಸಲ್ಯಾಳ ಕೈ ಹಿಡಿದಿದ್ದುಮದುವೆ ಆದ ಹೊಸತರಲ್ಲಿ ಚೆನ್ನಾಗೇ ಇದ್ದ ಕೂಡುಕುಟುಂಬದಲ್ಲಿ ಸಣ್ಣ ಬಿರುಕುಗಳು ಮೊದಲು ಅಡುಗೆ ಮನೆಯಿಂದಲೇ ಶುರುವಾದವು, ಬಿರುಕುಗಳನ್ನು ಮುಚ್ಚುವ ಎಲ್ಲ ಪ್ರಯತ್ನಗಳು ವಿಫಲವಾಗಿ ಮನೆಯು ವಿಭಜನೆಯ ಸಲುವಾಗಿ ಊರ ಹಿರಿಯರ ಮುಂದೆ ಬಂದು ನಿಂತಿತು. ಮನೆಯು ಇಬ್ಭಾಗವಾಗಿ ಇಬ್ಬರು ಸಹೋದರರ ಪಾಲಾಯಿತು ಮತ್ತು ಮನೆಯ ಮೇಲೆ ಇರುವ ಸ್ವಲ್ಪ ಸಾಲವನ್ನು ಅವರಿಬ್ಬರೇ ತೀರಿಸಿಕೊಳ್ಳಬೇಕೆಂದು, ನೀಲಕಂಠಯ್ಯನವರು ಹೊಸ ಮನೆ ಕಟ್ಟಿಕೊಳ್ಳುವುದೆಂದು ತೀರ್ಮಾನವಾಯಿತುಇನ್ನು ಇರುವ ಮೂರೆಕೆರೆ ಗದ್ದೆ ಮತ್ತು ಒಂದೆಕೆರೆ ತೋಟ ಎಲ್ಲರಿಗೂ ಸಮ ಪಾಲಾಯಿತು.



ಗಂಡ ಹೆಂಡತಿ ಇಬ್ಬರೂ ಕಷ್ಟಪಟ್ಟು, ಇತರರ ನೆರವಿನೊಂದಿಗೆ ವರುಷದೊಳಗೆ ಹೊಸಮನೆಯನ್ನು ಕಟ್ಟಿ ಹಾಲುಕ್ಕಿಸಿದರು. ಮನೆಯ ಎದುರಿಗೆ ವಾಡಿಕೆಯಂತೆ ಕುಳಿತುಕೊಳ್ಳಲು  ಕಟ್ಟೆ, ಮರಳು, ಮಣ್ಣು ಮತ್ತು ಸುಣ್ಣ ಮಿಶ್ರಣದಿಂದ ಕಟ್ಟಿದ ಗೋಡೆಗಳು, ಮನೆಯ ನಾಲ್ಕೂ ಮೂಲೆ ಮತ್ತು ನಾಲ್ಕೂ ಬಾಹುಗಳ ಮದ್ಯೆ ಮಾತ್ರ ಕೆಂಪು ಕಲ್ಲಿನಿಂದ ನಿರ್ಮಿತ ಮುಂಡಿಗೆಗಳು, ಬಿದಿರಿನ ಬೊಂಬುಗಳ ಓಡು ಮತ್ತು ಅವಗಳನ್ನು ಹಿಡಿದು ಕೂರಿಸಲು ಮುಂಡಿಗೆಗಳ ಮೇಲೆ ಕೂತಿರುವ ತೊಲೆಗಳು, ಮೇಲೆ ಮಂಗಳೂರು ಹಂಚುಗಳು. ಜೇಡಿಮಣ್ಣನ್ನು ನಯವಾಗಿ ವರೆದು ಮಾಡಿದ ನೆಲ, ಅದರ ಮೇಲೆ ಸಗಣಿಯಿಂದ ಸಾರಣೆ ಆಗಿದೆ. ಹೀಗೆ ಚಿಕ್ಕವಾದರೂ ಚೊಕ್ಕವಾಗಿರುವ ಮನೆ ಅವರದು. ಮನೆ ಕಟ್ಟುವ ಸಮಯದಲ್ಲಿನ್ನೂ ಆಗಷ್ಟೇ ನಡೆಯುವುದ ಕಲಿತ ಹುಡುಗ ಮನು, ಮಣ್ಣಿನಲ್ಲಿ ಆಟ ಆಡುವಾದೇ ಅವನ ದಿನಚರಿ. ಹೊಸ ಮನೆಗೆ ಬಂದ ಸವಿಗಳಿಗೆಯನ್ನು ಸವಿಯುತ್ತಿರುವಾಗಲೇ ನೀಲಕಂಠಯ್ಯನವರಿಗೆ ಇನ್ನೊಂದು ಸಕ್ಕರೆಗಿಂತ ಸವಿಯಾದ ವಾರ್ತೆ ಕೌಸಲ್ಯಾಳಿಂದ ಬಂದಿತು, ಕೌಸಲ್ಯಾ ಎರಡನೇ ಮಗುವಿನ ರೂಪನ್ನು ಹೊತ್ತ ಫಲವತಿಯಾಗಿದ್ದಳು. ನೀಲಕಂಠಯ್ಯನವರು ಇಮ್ಮಡಿ ಪ್ರೀತಿಯಿಂದ ಸತಿಗೆ ಎಲ್ಲ ಕಾರ್ಯಗಳಲ್ಲಿ ನೆರವಾಗುತ್ತಿದ್ದರುಆದರೆ ಮನುವಿನ ಬಾಲ್ಯ ಸಹಜ ಪ್ರಶ್ನೆಗಳಿಗೆ ಉತ್ತರಿಸದಾದರು, "ಅಮ್ಮನಿಗೆ ಏನಾಗಿದೆ ಹೊಟ್ಟೆ ಉಬ್ಬುತ್ತಿದಿಯೆಲ್ಲ ಎಂದು ತೊದಲು ನುಡಿಯಲ್ಲಿ ಪ್ರಶ್ನಿಸುವನು", "ಅಲ್ಲಿ ಪುಟ್ಟ ಮಗುವೊಂದಿದೆ ನಿನ್ನೊಡನೆ ಆಡಲು ಬರುತ್ತದೆ ಕೆಲ ದಿನಗಳು ತಡೆ" ಎಂದರೆ, "ಅದು ಅಲ್ಲಿ ಹೇಗೆ ಹೋಯಿತು" ಎನ್ನುವನು. "ಹಾಗಾದರೆ ದೊಡ್ಡಪ್ಪನ ಹೊಟ್ಟೆಯಲ್ಲೂ ಮಗುವಿದೀಯೆ ಅವರ ಹೊಟ್ಟೆಯೂ ದೊಡ್ಡದಾಗುತ್ತಿದೆ" ಹೀಗೆ ಅವನ ಪ್ರಶ್ನೆಗಳ ಸಾಗರವೇ ಏಳುತ್ತಿತ್ತು

ಅವರ ಎರಡನೇ ಹೆರಿಗೆಯು ನಮ್ಮೂರಲ್ಲೇ ಆಗಲಿ ಎಂಬ ತವರಿನ ಆಸೆ ಮತ್ತು ಕೌಸಲ್ಯಾಳ ಆಸೆಯಂತೆ, ಅವಳ ಹಿರಿಯ ಅಣ್ಣನೊಂದಿಗೆ ಕೌಸಲ್ಯ ಮತ್ತು ಮನುವಿನ ಸವಾರಿ ಅವನ ಅಜ್ಜನ ಮನೆ ಕಡೆ ಸಾಗಿತು. ತವರಿನಲ್ಲಿ ಅಜ್ಜಿ, ಅತ್ತಿಗೆಯರ ಪ್ರೀತಿ ಆರೈಕೆಯಲ್ಲಿ ಕೌಸಲ್ಯಾಳ ಹೆರಿಗೆ ಸುಸೂತ್ರವಾಗಿ ಜರುಗಿ ನಕ್ಷತ್ರಳಾ ಜನನವಾಯಿತು, ಮನುವು ಮೊದ ಮೊದಲು ಇದೇನಿದು ಮಗು ಚಿಕ್ಕದಾಗಿ ಬಿಳಿ ಹೆಗ್ಗಣದಂತಿದೆ ಎಂದು ಹತ್ತಿರವೇ ಬರುತ್ತಿರಲಿಲ್ಲ. ಹೀಗಂದ ಮನುಗೆ ಬಾಣಂತನ ಮುಗಿಸಿ ವಾಪಸಾದ ಮೇಲೆ ತಂಗಿಯ ಜೊತೆ ಆಡುವುದೇ ದಿನಾಚಾರಿಯಾಯಿತು


ಮಕ್ಕಳಿಬ್ಬರೂ ಬೆಳೆಯುತ್ತಾ ಅವರ ಮನೆಯ ಖರ್ಚು ವೆಚ್ಚಗಳ ಭರಿಸಲೆಂದು, ಪತಿಗೆ ವ್ಯವಸಾಯದಲ್ಲಿ ಕೈ ಜೋಡಿಸುವುದರ ಜೊತೆ ಜೊತೆಗೆ ಮಲೆನಾಡಿನ ಸಹಜ ತಿಂಡಿಗಳಾದ ಹಲಸು, ಬಾಳೆಕಾಯಿ ಚಿಪ್ಸ್, ಹಪ್ಪಳ, ಸಂಡಿಗೆ, ಮುಂತಾದನೇಕ ತಿಂಡಿಗಳ ತಯಾರಿಸಿ ಅಂಗಡಿ, ಬೇಕರಿಗಳಿಗೆ ಮಾರ ತೊಡಗಿದರು ಕೌಸಲ್ಯ.
ಹೀಗೆಯೇ ವರುಷಗಳುರುಳಿ ಮನು ಹೈ ಸ್ಕೂಲ್ ಮುಗಿಸುವುದರೊಳಗೆ  ಸತಿ ಪತಿಗಳ ಸಹ ದುಡಿಮೆಯಿಂದ, ಅವರ ಮನೆ ಹೊಸ ರೂಪು ಪಡೆದಿತ್ತು.   ಸಮಯದಲ್ಲಿ ಕೌಸಲ್ಯಾಳಿಗೆ ಕೆಲವೊಮ್ಮೆ ಎದೆ ನೋವು ಬರುತ್ತಿತ್ತು ಆದರೆ ಅದನ್ನವರು ನಿರ್ಲಕ್ಷಿಸಿದ್ದರು. ನಿರ್ಲಕ್ಷವು  ರಕ್ಕಸ ರೂಪ ತಾಳಿ ಅವರ ಮೇಲೆ ಎಗರುವ ಉತ್ಸಾಹದಲ್ಲಿತ್ತು

ಅಂದು ತೋಟದಲ್ಲಿ ಕೆಲಸ ಮಾಡುವಾಗ ಕುಸಿದು ಬಿದ್ದ ಕೌಸಲ್ಯಾಳನ್ನು ಆಸ್ಪತ್ರೆಗೆ ಕರೆದೊಯ್ಯುವುದಾರೊಳಗೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತುಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಕ್ಕೆ ಸಿಡಿಲೆಗರಿದಂತೆ ಅವರ ಬಾಳಿಗೆ ಎಗರಿತು ಜ್ವಾಲೆ.  ತನ್ನೊಡನೆ ಬಾಳ ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದವಳು ಇಂದು ನಡುಗಡ್ಡೆಯಲ್ಲಿ ತನ್ನ ಬಿಟ್ಟೋದಳೆಂದು ಕಣ್ಣೀರ ಸಾಗರವೇ ನೀಲಕಂಠಯ್ಯನವರ ಕಣ್ಣಿನಿಂದ ಉಕ್ಕುತ್ತಿತ್ತು. ಅವರ ಸ್ಥಿತಿಯೇ ಹೀಗಿರುವಾಗ ಮಕ್ಕಳ ದುಃಖ ಕೇಳುವರಾರು, ಸಮಾಧಾನ ಪಡಿಸುವರಾರು.


ಮುಂದುವರೆಯುವುದು....