Thursday, September 28, 2023

ಅಮ್ಮ ಈಗ ಬರೀ ನೆನಪು !!!

ಅದ್ಯಾವುದೋ ಸಿನೆಮಾದಲ್ಲಿ ಒಂದ್ ಕತೆ ಕೇಳಿದ ನೆನಪು, ಮಗ ತಾಯಿನ ಕೊಂದು ಅವ್ಳ ಹೃದಯಾನ ಕೈ ಲಿ ತಗೊಂಡ್ ಹೋಗೋವಾಗ ಎಡವ್ತನೆ ಆಗ ತಾಯಿ ಹೃದಯ ಹುಷಾರು ಮಗ ಬೀಳ್ತಿಯ ಅನ್ನುತ್ತಂತೆ. ಅಂದ್ರೆ ತಾಯಿಗೆ ಮಕ್ಳು ಬಗ್ಗೆ ಅಷ್ಟು ಪ್ರೀತಿ, ಅವ್ರು ಎಂತಾ ಮಕ್ಕಳೇ ಆಗ್ಲಿ ಅವ್ರು ಏನೇ ಮಾಡಿದ್ರೂ ತಾಯಿ ಪ್ರೀತಿ ಅವ್ರ ಬಗ್ಗೆ ಕಡಿಮೆ ಆಗಲ್ಲ.
ನಾನು ನಮ್ಮಣ್ಣ  ಸಣ್ಣವರಿದ್ದಾಗ  ಎಷ್ಟು ಗೋಳು ಹೊಯ್ಕಿಂಡಿದಿವಿ ಅಂತ ಇವತ್ತು ಗೊತ್ತಾಗುತ್ತೆ ನಂಗೆ.
ಹಾಸಿಗೆ ಹಾಸಿ ಕೊಡು ಬಾ ಅಮ್ಮ,
ಚದ್ದರ್ ಹೊಚ್ಚು ಬಾರಮ್ಮ,
ತಲೆ ತಟ್ಟಿ ಮಲಗಿಸು ಬಾರಮ್ಮಾ,
ಟಾಯ್ಲಟ್ಟಿಗೆ ಕರ್ಕೊಂಡ್ ಹೋಗು ಬಾರಮ್ಮ
ಹಿಂಗೆ ಅಮ್ಮ ಇಲ್ದೆ ಊಟ, ತಿಂಡಿ, ನಿದ್ದೆ , ಟಾಯ್ಲೆಟ್ ಏನು ಆಗ್ತಿರಲಿಲ್ಲ. ಇವತ್ತು ಒಬ್ಬ ಮಗನ್ನ ನೋಡಿಕೊಳ್ಳೋದೆ  ಸಾಕಾಗಿ ಹೋಗುತ್ತೆ ನಮಗೆ.

ಫೋನ್ ಮಾಡಿದ್ರೆ ಮೊದ್ಲು ಕೇಳೋ ಮಾತೇ ಊಟ ಸರಿ ಮಾಡು, ನಿದ್ದೆ ಸರಿ ಮಾಡು ಅಷ್ಟೇ. ಬೇರೆ ಯಾವುದೂ ಅವ್ಳಿಗೆ ಬೇಡ ಮಕ್ಳು ಊಟಾ ತಿಂಡಿ ಮಾಡ್ಕೊಂಡ್ ಆರಾಮ ಆಗಿ ಇರ್ಬೇಕು ಅಷ್ಟೇ ಅವ್ಳ ಆಸೆ.
COVID ಆದ್ಮೇಲೆ ವರ್ಕ್ ಫ್ರಮ್ ಹೋಂ ಇದ್ದಾಗ, ಯಾವಾಗ್ಲೂ ಬಂದು ಹಪ್ಪಳ ಸುಟ್ಟು ತುಪ್ಪ ಹಾಕಿ ಕೊಡ್ಲಾ, ಬೆಣ್ಣೆ ಹಾಕಿ ಕೊಡ್ಲಾ ಇದೆ ಅಂತ ಇಡೀ ದಿವ್ಸ ಕೇಳೋದೇ ಕೆಲ್ಸ.
ಹುಷಾರಿಲ್ಲ ಜ್ವರ ಬಂತು ಅಂದ್ರೆ ದೇವ್ರ ಬಸ್ಮ ಹಚ್ಚಿ ದೇವ್ರೆ ನನ್ ಮಗನ್ನ ಬೇಗ ಹುಷಾರ್ ಮಾಡಪ್ಪ ಅಂತ ಕೇಳೋವ್ಳು ನಮ್ಮಮ್ಮ.
ಮೊನ್ನೆ 26ನೇ ತಾರೀಖು ಸಂಜೆ ಸಡನ್ನಾಗಿ ನನ್ ಕಸಿನ್ ಬ್ರದರ್ ಫೋನ್ ಮಾಡಿ ಎಲ್ಲಿದಿಯ ಊರ ಕಡೆ ಹೋರ್ಡು ಅಂತಿದಾನೆ, ಇವ್ನಿಗೆ ಏನಾಯ್ತು ! ಮೊದ್ಲು ಏನಾಯ್ತು ಹೇಳು ಅಂದೆ.  ನಿಮ್ಮಮ್ಮ ಹೋದ್ರು ಅಂದ.
ಹೋದ್ರಾ ಯಾಕೆ ಏನಾಯ್ತು ಅಂದೆ ನಾನು.  ಇಲ್ಲ cardiac ಅರೆಸ್ಟ್ ,  ಅಸ್ಪತ್ರೆಲಿ ಡಾಕ್ಟರ್   ಮನೇಲೇ ಪ್ರಾಣ ಕಳೆದುಕೊಂಡಿದ್ದಾರೆ ಅಂದ್ರು ಅಂತ ಹೇಳ್ದ.
ಗಣೇಶ ಚತುರ್ಥಿಗೆ ಊರಿಗೆ ಹೋದವನು ಒಂದು ವಾರ ಇದ್ದು  ವಾಪಾಸ್ ಬಂದಿದ್ದೆ. ಬಂದು ಎರಡೇ ದಿನದಲ್ಲಿ ನಮ್ಮಮ್ಮ ನಮ್ಮನ್ನೆಲ್ಲಾ ಬಿಟ್ಟು  ಹೋಗಿದ್ದಾಳೆ. 

ಊರಿಗೆ ಬಂದು ನಮ್ಮಮ್ಮನ ಕಾರ್ಯ ಎಲ್ಲ ಮುಗ್ಸಿ ಆಯ್ತು. ಮೂರು ದಿವಸದ ಕಾರ್ಯ ಮುಗಿದ ಮೇಲೆ ಎಲ್ಲ ನೆಂಟರೂ ಹೋಗಿ ಮನೆಯವರ ಅಷ್ಟೇ ಉಳಿದಾಗ ಗೊತ್ತಾಗುತ್ತೆ ಮನೆ ಯಾಕೋ ಬಣ ಬಣ ಗುಟ್ಟುತ್ತ್ತಿದೆ ಅಂತ. ಇಡೀ ಮನೆ ತುಂಬಾ ಓಡಾಡಿಕೊಂಡು ಎಲ್ಲ ಕೆಲ್ಸನು ತಾನೇ ಮಾಡುತ್ತಿದ್ದ ಅಮ್ಮ ಎಲ್ಲಿ ಹೋದ್ಲು ಅಂತ , ಇಷ್ಟು ಆಕಸ್ಮಿಕವಾಗಿ ಹೇಗೆ ಹೋದ್ಲು ಅಂತ 😥. 

ಜೀವನದಲ್ಲಿ ಯಾರೇ ಬಂದ್ರು ನನ್ನಮ್ಮನಷ್ಟು  ಪ್ರೀತಿ ಕೊಡೋಕೆ ಯಾರಿಂದಲೂ ಸಾಧ್ಯ ಇಲ್ಲ 😥.
ಎರಡು ತಿಂಗಳ ಹಿಂದೆ ಯಾರೋ ನೆಂಟರ ಮನೆ ಮದ್ವೆಗೆ ಹೋದಾಗ ಎಲ್ಲರಿಗೂ ನನ್ನ ಮೊಮ್ಮಗನ ಚೌಲ ಮಾಡ್ತೀವಿ ಎಲ್ರೂ ಬನ್ನಿ ಅಂತ ಕರೆದು  ಬಂದಿದ್ದಳಂತೆ ಈಗ ಅವ್ಳೆ ಇಲ್ಲ !!
ನಾನು  ವಯಸ್ಸಾಗಿ ,  ಹಾಸಿಗೆ ಹಿಡಿದು ನನ್ನ   ಮಕ್ಳು ಸೊಸೆ ಯಾರಿಗೂ ತೊಂದರೆ ಕೊಡಬಾರದು, ಗಟ್ಟಿ ಇದ್ದು ಕೆಲ್ಸ ಮಾಡ್ತಾನೆ   ಹಾರ್ಟ್ ಅಟ್ಟ್ಯಾಕ್ ಆಗಿ ತಕ್ಷಣ ಕಣ್ಣು ಮುಚ್ಚಿಕೊ ಬೇಕು ಅಂತ ಯಾವಾಗ್ಲೂ ಹೇಳ್ತಾನೆ ಇರ್ತಿದ್ಲು ನಮ್ಮಮ್ಮ, ಈಗ ಅದನ್ನೇ ನಿಜ ಮಾಡಿ ಹೋದ್ಲು. ತನ್ನ ಆಸೆ ಅಂತೇನೆ ಹೋದ್ಲು ನಮ್ಮಮ್ಮ.

ಎಲ್ಲಿದ್ದರೂ ಚೆನ್ನಾಗಿರಲಿ ನಮ್ಮಮ್ಮ, ಅಷ್ಟೇ ಕೇಳಿ ಕೊಳ್ಳೋಕೆ  ಸಾಧ್ಯ ಈ ಮಕ್ಕಳ ಹತ್ರ. 

Thursday, June 8, 2017

ತುಂಡು ಹೈಕ್ಲು ಟ್ರಾವೆಲ್ ಡೈರಿ - 1


ಮತ್ತ್ ಶನಿವಾರ ಬಂತ್ ಅಂತೇಳಿ ಮುಂಜಾನಿ ಲೇಟ್ ಆಗಿಎದ್ದ್ ಅರಿವಿ ತೊಳ್ದು ಹಾಕಿ, ಉಡುಪಿ ಹೋಟೇಲ್‌ನ್ಯಾಗ್ ಬನ್ಸ್ ಕೊಬ್ಬರಿ ಚಟ್ನಿ ಕಟದು ವಿಜಯನಗರ್ ಕಡೆ ಹೊಂಟೆ. ಬ್ಯಾಚಲರ್ ರೂಮ್ ಹೇಂಗಿರ್ಬೆಕ್ಪಾ ಅಂದ್ರ್ ನಮ್ ಈ ರೂಮ್ ನೋಡ್ಬೆಕ್ರಿ ನೀವು. ಆ ರೂಮ್ನ್ಯಾಗಿನ್ ಆಕ್ಚುವಲ್ ರೂಮ್ಮೇಟ್ ಯಾಂವೂ ಹೊಸಬ ಯಾಂವೂ ಒಂದು ಗೊತ್ತಾಗಂಗಿಲ್ಲ ಅಷ್ಟ್ ಮುಸುಡಿ ತುಂಬಿರ್ತಾವ್ ರೂಮ್ನ್ಯಾಗ್ ಆ ರೂಮ್ನ್ಯಾಗ್ ಏನಾರ ಅಪ್ಪಿತಪ್ಪಿ ಮರ್ತ್ ಬಂದ್ರ್ಲಾ ಅದನ್ನ್ ಮರ್ತ್ ಬಿಡೋದ್ ನೋಡ್ರಿ, ಅವ್ನೌನು ಅವ್ರ್ ರೂಮ್ನ್ಯಾಗ್ ಅವ್ರ ಬಟ್ಟೆ ಅದು ಇದು ಕಳ್ಕೊಂಡ್ ಹುಡ್ಕ್ತ ಇರ್ತಾವ್. ಇಡೀ ದಿನ ಇಲ್ಲೆ ರೂಮ್ನ್ಯಾಗ್ ಬಿದ್ದ್  ಹೊಳ್ಯಾಡೂದ್ ಆಗೂಂಗಿಲ್ಲ್ ಅಂತೇಳಿ ಎಲ್ಲಾರ ಟ್ರಿಪ್ ಹೋಗೂದ್ ಡಿಸೈಡ್ ಆತು.  ಬಿಸಿಲೆ ಘಾಟ್ ಬೈಕ್ ರೈಡ್ ಮಾಡ್ಕೊಂಡ್ ಮತ್ತ ಕುಮಾರಪರ್ವತ ಟ್ರೆಕಿಂಗ್ ಮಾಡುದ್ ಅಂತೇಳಿ ಯಾಂವ್ಯಾಂವ್. ಬರೂಂವ ಅಂತಾ ಎಲ್ರಿಗೂ ಕೇಳಿ ರಾತ್ರಿ ೧ ಗಂಟಿಗ್ ನೆಲಮಂಗಲದಾಗ್ ಮೀಟ್ ಆಗೂ ಪ್ಲಾನ್ ಆತ್.  ವಿಜಯನಗರ್ಕಡಿಂದ ನಾನು, ಪ್ರಣಯರಾಜ (ಚೇತ್ಯಾ), ಹಂದಿ (ಸೋಮ್ಯಾ), ಕುಕ್ಕಾ(ಚಂದ್ರ್ಯಾ), ಪಪ್ಪೀ(ವಿರೂಪ್ಯಾ), ಲೇಟ್(ಮಾಂತ್ಯಾ), ಬಗ್(ಬ್ಯಾಡ್ಗಿ), ರಘುರಾಮ, ಅಜಿತ್ ಮತ್ತ್ ವೈಟ್ಫೀಲ್ಡ್ ಕಡಿಂತ ಬತ್ತಿ(ವೀರೇಶ್), ಹುಲಿರಾಯ(ಸುಧ್ಯಾ)  ಬರೂರ್ ಇದ್ರ್.
೧ ಗಂಟಿಗ್ ಎಲ್ಲಾ ನೆಲಮಂಗಲದಾಗ್ ಚಾ ಕುಡ್ದು ಅಲ್ಲಿಂದ ಹೊಂಟ್ವಿ. .ಮುಂದ್ ಹಿಂಗ್ ಎಲ್ಲಾ ಟೋಲ್ದಾಗೂ ನಿಲ್ಸಿ, ಚಾ ಕಟಿಯುದು ನಮ್ ಕುಕ್ಕಾಂದು favourite ಬನ್ ತಿನ್ನೂದು, ಹಂಗ ನಮ್ ಲೇಟ್ ಮಾಡಹತ್ತಿದ್ ಜುಂಬಾ ಸ್ಟೆಪ್ಸ್ ಮಾಡುದ್ ಯಾಕಂದ್ರ್ ಬೈಕ್ನ್ಯಾಗ್ ಕುಂತ್ ಕುಂತ್ ಕುಂಡಿ relaxation ಬೇಡ್ತಿದ್ವು. ಹಿಂಗ ಮಾಡ್ಕೋಂತ ಹಾಸನದ್ ಹತ್ರ ಬಂದ್ವಿ. ಅಲ್ಲಿ ಒಂದ್ ಟೋಲ್ನ್ಯಾಗ್ ನಾ ಬೈಕ್ ಪಪ್ಪೀಗ್ ಕೊಟ್ಟೆ ನಮ್ ಕುಕ್ಕಾನ್ ಗಾಡ್ಯಾಗ್  ನಾ ಕುಂತೆ. ಆಕ್ಚ್ಯುವಲೀ  ಅವನ ಗಾಡಿ ಒಂದ್ ಬಿಟ್ಟ್ ಎಲ್ಲಾ occupy ಆಗಿ ಹೋದ್ವು. ಅದಕ್ಕ್ reason ಆಮ್ಯಾಲ್ ಗೊತ್ತಾತ್, ಕುಕ್ಕಾ ಹುಚ್ಚ್ನಾಯಿ ಹಂಗ ಗಾಡಿ ಕಟಿಯಾಕ್ ಶುರು ಹಚ್ಚಿದ, ಎಲಾ ಇವನೌನು ಒಳ್ಳೆ ಇವನ್ ಗಾಡಿಯಾಗ್ ನಾ ಕುಂತೆ ಅಂತ ಅನ್ಸಾಕ್ಹತ್ತು, ಹಂಗ ಸಕಲೇಶ್ಪುರ ಹತ್ರ ಬಂದಾಂಗ ಒಂದು hard curveನ್ಯಾಗ ಇಬ್ರೂ ಬುಲೆಟ್ ಜೊತೆಗೆ ಉಳ್ಡಿದ್ವಿ.  ಹಂಗ ಹಿಂದ್ ನಮ್ ಹುಡುಗ್ರೆಲ್ಲಾ ಬಂದು ಗಾಡಿ ಎತ್ತಿ ಮತ್ತ್ ಅದ್ರಾಗ್ ಕಾಮೆಡೀ ಮಾಡ್ಕೊಂಡ್ ಸಕಲೇಶ್ಪುರ ರೀಚ್ ಆಗಿ ಫೋರ್ಟ್ಗೆ ಹೋದಾಗ ೬ ಗಂಟಿ ಅಗಿತ್ತ್.   ಆಮ್ಯಾಲ್ ಸಕಲೇಶ್ಪುರದಾಗ್ ನಾಷ್ಟಾ ಮುಗ್ಸಿ ಅಲ್ಲಿಂದ ಬಿಸಿಲೆ ಘಾಟ್ ಕಡಿಗ್ ಹೊಂಟ್ವಿ. ಅದ್ಕೂ ಮೊದ್ಲ ಮಲ್ಲಳ್ಳಿ ಫಾಲ್ಸ್ ನೋಡ್ಬೆಕ್ ಅಂತೇಳಿ ಅಲ್ಲಿಗ್ ಹೋದ್ವಿ. ಅಲ್ಲಿಗ್ ಹೋಗುದ್ರ್ ಒಳಗ ಎಲ್ರಿಗೂ ಸುಸ್ತ್ ಆಗಿತ್ತ್ ರಾತ್ರಿ ನಿದ್ದೆ ಬ್ಯಾರೆ ಇರ್ಲಿಲ್ಲಾ, ಫಾಲ್ಸ್ ಹತ್ರ ಹೋಗಿ ಟೆಂಟ್ ಹಾಕ್ಕೊಂಡ್ ಅಲ್ಲೇ ಮಧ್ಯಾಹ್ನ ತನ ನಿದ್ದಿ ಹೊಡ್ದ್ ಅಲ್ಲಿಂದಾ ಬಿಸ್ಲೆ ಘಾಟ್ಗೆ ಹೋದ್ವಿ.

ಬಿಸ್ಲೆ ಘಾಟ್ ಹಸಿರ್ ತುಂಬ್ಕ್ಯಾಂಡ್ ಇರೂ ಒಂದ್ ಕಾಡ್ ಐತಿ.  ನಾವ್ ಹೋಗಿದ್ ಸೆಪ್ಟೆಂಬರ್ನಾಗ್ ಆಗಿದ್ದಕ್ಕ ಸಣ್ಣಗ್ ಸುರಿಯೋ ಜಡಿ ಮಳಿ ನಮ್ಮನ್ ವೆಲ್‌ಕಮ್ ಮಾಡ್ತು. ನಾವೂ ಹಂಗ ಆ ವೆಲ್‌ಕಮ್ ನಾ ಖುಷಿಂದಾನ ತಗೊಂಡ್ ಮಳಿಯಾಗ ಹಂಗ ಗಾಡಿ ಹೊಡ್ಕೊಂಡು ಹೊಂಟ್ವಿ.  ಯಾವ್ದೋ ಕಾಲ್ದಾಗ್ ಇಲ್ಲಿ ರಸ್ತೆ ಇತ್ತ್ ಅಂತೇಳೋ ಕಲ್ಲು ಪೊಟರೆ ರಸ್ತೆ, ರಸ್ತೆದಾಗ ಹರಿಯೋ ಹೊಳೆ, ಸುರಿಯಾಕ ಹತ್ತಿದ್ ಮಳೆ ಸಂಬಂಧ ಆಗಿರೋ ಮಂಜು, ಕತ್ಲು, ಅದರ್ ಮಧ್ಯಾ ನಮ್ ಬೈಕ್ ರೈಡ್ ಭಾಳ್ ಸೂಪರ್  ಆಗಿನ ಎಂಜಾಯ್ ಮಾಡ್ಕೊಂಡ್ ಕುಕ್ಕೆ ಹೋಗಿ ಮುಟ್ಟೀದಾಗ್ ಸಂಜೆ 6 ಗಂಟೆ ಆಗಿತ್ತ. ಅಲ್ಲೇ ಕುಕ್ಕೆದಾಗ ಒಂದು ಲಾಡ್ಜ್ನ್ಯಾಗ್ ರೂಮ್ ಮಾಡಿ ಉಳಿದು, ಮರುದಿನ ಮುಂಜಾನೆ ಎದ್ದ್ ಕುಕ್ಕೆ ದರ್ಶನ ಮುಗ್ಸಿ, ಟೆಂಟ್ ಮತ್ತ್ ಟ್ರೆಕಿಂಗ್ ಬೇಕಾಗಿರೋ ಎಲ್ಲ ಲಗೇಜ್ ತಗೊಂಡ್ , ಹಾದ್ಯಾಗ್ ತಿನ್ನಾಕ್ ಎಲ್ಲ ತಗೊಂಡು, ಲಾಡ್ಜ್ನಿಂತ ಟ್ರೆಕಿಂಗ್ ಸ್ಟಾರ್ಟ್ ಪಾಯಂಟ್ಗೆ ಆಟೋದಾಗ್ ಹೋದ್ವಿ.

ಅಲ್ಲಿಂದ ಕಾಡ್ನ್ಯಾಗ್ ಗುಡ್ಡ ಹತ್ತೂದು ಮತ್ತ ಇಳಿಯೂದು, ಅಲ್ಲಲ್ಲಿ ಕುಂತು ರೆಸ್ಟ್ ತಗೋಳುದು, ಆದ್ರ ನಡುಕ್ ನಮ್ ಹುಡುಗ್ರ್ ಕಾಮೆಡೀ ಹಿಂಗ್ ಮದ್ಯಾನ್ಹ ಆಗ್ತಿದ್ದಾಂಗ ಭಟ್ರ ಮನೆ ಕಡಿ ಬಂದ್ವಿ, ಅಲ್ಲಿಗ ಮೊದ್ಲೇ ಫೋನ್ ಮಾಡಿ ೧೨ ಜನ್ರಿಗ ಊಟಕ್ಕ ಹೇಳಿದ್ವಿ, ಅವ್ರು ರೆಡೀ ಮಾಡಿ ಇತ್ಟಿದ್ರ, ಸರಿ ಎಲ್ಲಾ ಸೇರಿ ಮತ್ತ ಊಟ ಹೊಡೆದು ಒಂದು ಸಣ್ಣ ನಿದ್ದಿ ಹೊಡೆದ್ವಿ. ಎದ್ದು ಮ್ಯಾಲ ಪೀಕ್ ರೀಚ್ ಆಗೋಣ ಅಂತ ನೋಡಿದ್ರೆ, ಹಿಂದಿನ ತಿಂಗಳ ಯಾಂವನೋ ಮಂಗ್ಯಾನ ಮಗ ಟ್ರೆಕಿಂಗ್ ಮಾಡಾಕ್ ಹೋಗಿ ಕಳೆದು ಹೋಗಿದ್ನಂತ ಅದಕ್ಕ ನಾವು ಯಾರಿಗೂ ಪೀಕ್ಗೆ ಬಿಡುದಿಲ್ಲ ಅಂತ ಫಾರೆಸ್ಟ್ ಚೆಕ್ ಪೋಸ್ಟ್ನ್ಯಾಗ್ ಬತ್ತಿ ಇಟ್ರ ನಮಗ. ನಾವು ಮುಖ ಒಣಗಿಸ್ಕೊಂಡ್ ಇಲ್ಲೆ ಭಟ್ರ ಮನಿ ಕಡಿನ ಒಂದು  ಪೀಕ್ ಹುಡುಕಿ ಅಲ್ಲೇ ಟೆಂಟ್ ಹಾಕಿ ರಾತ್ರಿ ಕಳಿಯೋ ಹಂಗ ಮಾಡ್ಕೊಂಡ್ವಿ.  ಸಂಜೆಕಡಿಗ ಪೂರ ಅಲ್ಲೇ ಮಸ್ತಿ ಮಾಡಿ ರಾತ್ರಿ ಭಟ್ರ ಮನಿಗ ಊಟಕ್ಕ್ ಹೊಂಡ್ಬೇಕು ಅಂತ ನೋಡ್ತೀವಿ ಟಾರ್ಚ್ ಬಿಟ್ರು ಏನು ಕಾಣ್ಲಾರದಷ್ಟು ಮಂಜು , ಅದರಾಗ ಹೆಂಗೋ ಭಟ್ರ ಮನೀಗ್ ಹೋಗಿ ರಾತ್ರಿ ಊಟ ಮಾಡಿ ಟೆಂಟ್ ಹಾಕಿದಲ್ಲಿಗ್ ಬಂದು ಟೆಂಟ್ ಸೇರಿದ್ವಿ, ಹಂಗ ರಾತ್ರೆಲ್ಲಾ  ಮಳಿನೂಸರಿಯಾಗಿ ಕಟಿತು. ಮುಂಜಾನಿ ಎದ್ದು ನೇಚರ್ ಕಾಲ್ನಾ ನ್ಯಾಚುರಲ್ ಆಗಿ ಮುಗ್ಸಿ, ಟೆಂಟ್ ಕಿತ್ಕೊಂಡು ಅಲ್ಲಿಂದ ವಾಪಸ್ ಇಳಿಯಾಕ್ ಶುರು ಹಚ್ಚೀದ್ವಿ.  ವಾಪಸ್ ಲಾಡ್ಜ್ಗೆ ಬಂದು ಸ್ನಾನ ಮಾಡಿ ರೆಡೀ ಆಗಿ ಕುಕ್ಕೆ ದೇವಸ್ಥಾನದಾಗ ಊಟ ಹೊಡೆದು, ಮತ್ತ್ ಬೆಂಗಳೂರು ಕಡೆ ನಮ್ಮ್ ಬೈಕ್ ತಿರ್ಗಿಸಿದ್ವಿ. ಆದ್ರೆ ನಾ ಮಾತ್ರ ಇನ್ಮ್ಯಾಗ ಕುಕ್ಕಾನ ಬೈಕ್ ಹತ್ಟಂಗಿಲ್ಪ ಅಂತೇಳಿ ಅಲ್ಲಿಂದ ಹೊಂಟ್ವಿ.
ಕುಣಿಗಲ್ ಡಾಬಾದಾಗ್ ರಾತ್ರಿ ಊಟ ಮಾಡಿ, ವಿಜಯನಗರದ್ ರೂಮ್ ಮುಟ್ಟಿದಾಗ ರಾತ್ರಿ ೧೧ ಆಗಿತ್ತು. ಅಂತೂ ನಮ್ ೩ ದಿವಸದ ವೀಕೆಂಡ್ ಮೊಜಿನ್ಯಾಗ್ ಕಳೆದು ಹೋತು.






Monday, May 1, 2017

ಮಲೆನಾಡು ಡೈರಿ - 3


ಜಗವ ಬಿರಿವ ನೋವನು ಒಡಲಾಳದಲಿ ನುಂಗಿ ಜನ್ಮವಿತ್ತವಳು ಅವಳು
ಎದೆಹಾಲುಣಿಸಿ , ಕೈ ತುತ್ತ ತಿನಿಸಿ ಖುಷಿ ಪಟ್ಟ ನಿಸ್ವಾರ್ಥಿ ಅವಳು
ನಮ್ಮ ಹಸಿವ ನೀಗಿಸುವುದರಲಿ ತನ್ನ ಹಸಿವ ಮರೆತವಳು ಅವಳು
ನಮ್ಮ ನೋವಿಗೆ ಕಣ್ಣೇರಾದವಳು ಆಕೆ
ಕಿವಿಯ ಹಿಂಡಿ ಬದುಕ ಕಲಿಸಿದವಳು ಅವಳು
ಜಗದೆದುರು ನಮ್ಮ ರಕ್ಷಿಸುವ ವಜ್ರಕವಚ ಅವಳು
ಅವಳಿಗಾರು ಸರಿಸಾಟಿ ಜಗದಲಿ, ಅವಳಿಲ್ಲದೆ ಜಗವಿಲ್ಲ.

ಮನೆಯ ನಂದಾದೀಪವೇ ಆರಿ ಹೋಗಿ ಕತ್ತಲೆ ಆವರಿಸಿತು ಮನೆಯಲ್ಲಿ, ತಾಯಿಯ ಕಳೆದುಕೊಂಡು ಮಂಕಾದ ಮಕ್ಕಳು, ಕೌಸಲ್ಯಾಳ ನೆನಪಲ್ಲೇ ದಿನಗಳು ಉರುಳುತ್ತಿದ್ದವು. ಕೌಸಲ್ಯಾಳ ತಂಗಿ ಕೆಲದಿನಗಳ ಕಾಲ ಅಲ್ಲೇ ಇದ್ದು ಮನೆಗೆಲಸ ನಿಭಾಯಿಸಿದಳು. ಯಾರಾದರೂ ಎಷ್ಟು ದಿನ ಸಹಾಯ ಮಾಡಿಯಾರು ಅವರಿಗೂ ಅವರದೇ ಸಂಸಾರವಿಲ್ಲವೇ. ಚಿಕ್ಕಮ್ಮ ತನ್ನೂರಿಗೆ ಹೋದ ಮೇಲೆ ನಕ್ಷತ್ರಳೆ ಎಲ್ಲ ಕೆಲಸಗಳ ಜವಾಬ್ದಾರಿ ವಹಿಸಿಕೊಂಡಳು. ನಮ್ಮವರು ಕಾಲವಾದರೆಂದು ಕಾಲ ನಿಲ್ಲುವುದೇ, ಕಾಲ ಕಳೆದು ಹೋದಂತೆ ತಂಗಿಯೇ ತಾಯಿಯಾದಳು ಮನೆಗೆ.  ತಮ್ಮ ಓದಿನೊಂದಿಗೆ ಮನೆಯನ್ನು ನಿಭಾಯಿಸುವುದ ಕಲಿತರು ಮನು ಮತ್ತು ನಕ್ಷತ್ರ.  ನಕ್ಷತ್ರ ಬೆಳಿಗ್ಗೆಯೇ ಬೇಗ ಎದ್ದು ಮನೆಯ ಕಸ ಗುಡಿಸಿ, ಅಂಗಳದಲ್ಲಿ ರಂಗೋಲಿ ಹಾಕಿ, ಹಸು ಕರುಗಳಿಗೆ ಮೇವು ಹಾಕಿ, ಹಾಲು ಕರೆದು, ಸ್ನಾನ ಪೂಜೆ ಮುಗಿಸಿ ತಿಂಡಿ ರೆಡೀ ಮಾಡುವಳು. ಅಷ್ಟರಲ್ಲೇ ಮನು ತಂದೆಯೊಡಗೂಡಿ ಕೊಟ್ಟಿಗೆಗೆ ಹಾಸಲು ದರಕನ್ನೊ ಅಥವಾ ಹಸಿ ಸೊಪ್ಪನ್ನು ತಂದು, ಕೊಟ್ಟಿಗೆಯ ಶುಚಿಗೊಳಿಸಿ, ಸೊಪ್ಪು ಹಾಸಿ ಬಂದು ಸ್ನಾನ ಮುಗಿಸಿ ರೆಡಿ ಆಗಿ ಕರೆದ ಹಾಲನ್ನು ಡೈರಿಗೆ ಹಾಕಿ ಬರುವನು. ಮೂವರು ಕೂಡಿ ತಿಂಡಿ ಮುಗಿಸಿ ಮನು ನಕ್ಷತ್ರಳನ್ನು ಹೈಸ್ಕೂಲ್ಗೆ ಬಿಟ್ಟು ತನ್ನ ಕಾಲೇಜ್ ಸೇರುವನು. ಇದು ನಿತ್ಯದ ಅವರ ಕಾಯಕವಾಯಿತು.


 ಮನು ಬಿಕಾಂ ಮೊದಲನೇ ವರ್ಷಕ್ಕೆ ಕಾಲಿಡುವ ಜೊತೆ ಜೊತೆಗೆ ಮನೆಯ ಎಲ್ಲ ಕೆಲಸಗಳಲ್ಲಿ ತಂದೆಗೆ ಸಹಾಯವಾಗಿ ನಿಂತನು. ಮಳೆಗಾಲದ ಆರಂಭವಾಗುವ ಮುಂಚೆ ತಂದೆ ಮಕ್ಕಳಿಬ್ಬರೂ ಸೇರಿ ತೋಟದ ಕಾಜಿಗೆಗಳನ್ನು ನೀರು ಹರಿದಾಡಲು ಅನುವಾಗಾವಂತೆ ಕ್ಲೀನ್ ಮಾಡಿ, ಈಗಾಗಲೇ ಫಲ ಕೊಟ್ಟ ದೊಡ್ಡ ಬಾಳೆಗಿಡಗಳ ಕಿತ್ತು ಅದರ ಜಗದಲ್ಲಿ ಬಾಳೆ ಸಸಿಗಳನ್ನು ನೆಟ್ಟು ಮುಗಿಸಿದರು. ಅಡಿಕೆ ಕೊನೆಗಳಿಗೆ ಸುಣ್ಣ ತುತ್ತ ಮಿಶ್ರಿತ ಔಷಧಿ ಸಿಂಪಡಿಸಿ ತೋಟದ ಕೆಲಸ ಮುಗಿಸಿದರು. ಅಷ್ಟರಲ್ಲಾಗಲೇ ಆರಿದ್ರಾ ಮಳೆ ಪ್ರಾರಂಭವಾಗಿತ್ತು. ಮಲೆನಾಡಿನ ವಾಡಿಕೆಯಂತೆ ಆರಿದ್ರಾ ಮಳೆಯ ಸಂಧರ್ಭದಲ್ಲಿ ಶುಭ ಸೋಮವಾರದ ದಿನ ಊರಿನಲ್ಲಿ, ಜಮೀನಿನ ಹತ್ತಿರದಲ್ಲಿ ಎಲ್ಲಾ ಕಡೆ ಇರುವ ದೇವದೇವತೆಗಳಿಗೆ ಊರಿನವರೆಲ್ಲಾ ಸೇರಿ ಪೂಜೆ ಹಣ್ಣುಕಾಯಿ ಮಾಡಿ, ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿ ಆರಿದ್ರಾಮಳೆಹಬ್ಬ ಆಚರಿಸಿದರು. ಮಳೆಗಾಲದ ಮೊದಲ ಮಳೆ ಅದು ಆದ್ದರಿಂದ ಎಲ್ಲಾ ದೇವರಿಗೆ ಪೂಜಿಸಿ ಅವರ ಅನುಗ್ರಹದಿಂದ ಮಳೆಗಾಲ ಚೆನ್ನಾಗಿ ಆಗಲಿ ಎಂಬ ಒಂದು ನಂಬಿಕೆ.  ನಂತರ ಸಿಡಿಲು ಗುಡುಗುಗಳ ಆರ್ಭಟದೊಂದಿಗೆ ಶುರುವಾದ ಮಳೆರಾಯ ಎರಡು ವಾರವಾದರೂ ಬಿಡುವಿಲ್ಲದೆ ಸುರಿದನು. ಹಾಗೆಯೇ ಭಾನುವಾರದಂದು ಛತ್ರಿ ಹಿಡಿದು ತಮ್ಮ ಗದ್ದೆಬಯಲನ್ನು ನೋಡಲು ಹೋದ ಮನುಗೆ ಅದು ನೀರಿನಿಂದ ತುಂಬಿ ಸಮುದ್ರದಂತೆ ಭಾಸವಾಯಿತು. ಬಿರುಗಾಳಿಯಂತೆ ಬೀಸುವ ಗಾಳಿಗೆ ಛತ್ರಿ ಅಲ್ಲೋಲ ಕಲ್ಲೋಲವಾಗುತಿತ್ತು.  ಗದ್ದೆಯ ತುಂಬಾ ಏಡಿ, ಕಪ್ಪೆ ತುಂಬಿದ್ದವು, ಕಪ್ಪೆಗಳು ವಟಗುಟ್ಟುತ್ತಾ ಉಲ್ಲಾಸದಿಂದ ಪುಟಿದಾಡುತ್ತಿದ್ದವು. ಕಪ್ಪೆಗಳ ನೋಡಿ ನೀರಹಾವುಗಳು ಭಕ್ಷ ಭೋಜನ ಸಿಕ್ಕಿತೆಂದು ನಲಿಯುತ್ತಾ ನೀರ ಮೇಲೆ ಓಡುತ್ತಿದ್ದವು. ಅಲ್ಲೇ ಪಕ್ಕದಲ್ಲಿ ದೊಡ್ಡ ದೊಡಾ ಏಡಿಗಳನ್ನು ಹಿಡಿದು ಮದ್ಯಾನ್ಹದ ಊಟಕ್ಕೆ ಚೀಲ ಸೇರಿಸುತ್ತಿದ್ದ ಹುಡುಗರು ಇದ್ದರು. ಹೀಗೆಯೇ ಒಂದು ಸುತ್ತು ಹಾಕಿ ಅವನು ಮನೆಗೆ ಹಿಂದಿರುಗಿದನು.

ಮನು ಉತ್ತಮ ದರ್ಜೆಯಲ್ಲಿ ಬೀ ಕಾಂ ಪಾಸ್ ಮಾಡಿ ಎಂ ಬಿ ಎ ಮಾಡಲು ಊರಿನಿಂದ ಮೊದಲ ಬಾರಿ ಪರ ಊರಿಗೆ ಪಯಣ ಬೆಳಸಿದನು. ನಕ್ಷತ್ರ ಆಗಲೇ ಪಿಯುಸಿ ಓದುತ್ತಿದ್ದಳು. ಮೊದ ಮೊದಲು ತನ್ನ ತಂಗಿ, ತಂದೆ ಹೀಗೆ ಊರಿನ ನೆನಪುಗಳಲ್ಲೆ ಇರುತ್ತಿದ್ದ ಅವನ ಚಿತ್ತ ಗೆಳೆಯರ ಗುಂಪು ಹೆಚ್ಚಾದಂತೆ ಕಣ್ಮರೆಯಾಗುತ್ತಾ ಹೋಯಿತು. ಎರಡು ವರ್ಷದ ಓದು, ಹಾಸ್ಟೆಲ್ ರೂಮಿನ ಹಾಳು ಹರಟೆಗಳು, ಕಾಲೇಜ್ ಕ್ಯಾಂಟೀನ್ನಲ್ಲಿನ ಬೈಟು ಚಾಯ್ ಮತ್ತು ಮಿರ್ಚಿಗಳು, ಲ್ಯಾಪ್ಟಾಪ್ ನಲ್ಲಿನ ಕೌಂಟರ್  ಸ್ಟ್ರೈಕ್ ಮತ್ತು ಎನ್ ಎಫ್ ಎಸ್ ಗೇಮ್ಗಳು, ಎಗ್ಸ್ಯಾಮ್ ಹಿಂದಿನ ದಿನದ ನೈಟ್ ಔಟ್ ಗಳಲ್ಲಿ ಮುಗಿದಿದ್ದೇ ಗೊತ್ತಾಗಲಿಲ್ಲ. ಓದು ಮುಗಿಸಿ ಕ್ಯಾಂಪಸ್ ಡ್ರೈವ್ ನಲ್ಲಿ ಕೆಲಸ ಗಿಟ್ಟಿಸಿದ ಮನು, ಫೈನಲ್ ಎಗ್ಸ್ಯಾಮ್ ಮುಗಿಸಿ ಊರಿಗೆ ಬಂದು ಬೆಂಗಳೂರಿಗೆ ಹೋಗುವ ತಯಾರಿಯಲ್ಲಿ ತೊಡಗಿದನು.

ಮಜೆಸ್ಟಿಕ್ನ ಆ ಜನಸಾಗರವನ್ನು ದಾಟಿ ಪ್ಲ್ಯಾಟ್‌ಫಾರ್ಮ್ ಹುಡುಕಿ ತನ್ನ ಕಾಲೇಜಿನ ಗೆಳೆಯರ  ಪೀಜಿ ಸೇರುವುದರೊಳಗೆ ಹೈರಾಣಾದನು.  ಕಾರ್ಪೊರೇಟ್ ಜಗತ್ತಿನ ಹೊಸ ರೀತಿ ರಿವಾಜುಗಳನ್ನು ಕಲಿಯುತ್ತಾ, ವೀಕೆಂಡ್ಗಳಲ್ಲಿ ಬಿಎಂಟಿಸಿ ದಿನದ ಪಾಸ್ಸಿನ ಸಂಪೂರ್ಣ ಉಪಯೋಗ ಮಾಡಲೇಬೇಕೆಂದು ಪಣ ತೊಟ್ಟವರಂತೆ ಬೆಂಗಳೂರಿನ ಮೂಲೆ ಮೂಲೆಗಳನ್ನು ಜಾಲಾಡಿಸಿ ಆಯಿತು ಗೆಳೆಯರೊಂದಿಗೆ.  ಇರುವ ಮಾಲ್ಗಳು, ಶಾಪಿಂಗ್ ಸೆಂಟರ್ಗಳು, ಹೊಸ ಹೊಸ ಚಲನಚಿತ್ರಗಳು, ತಿಂಗಳಿಗೊಮ್ಮೆ ಊರಿನ ಪಯಣ ಹೀಗೆ ಸಾಗಿತು ಅವನ ಬೆಂಗಳೂರಿನ ಜೀವನ. ಬೆಂಗಳೂರಿನಲ್ಲಿ ಇವನು 4 ವರ್ಷದ ಜೀವನ ಮುಗಿಸುವುದರೊಳಗೆ ತಂಗಿಯೂ ಮಾಸ್ಟರ್ಸ್ ಮುಗಿಸಿ ಅಲ್ಲೇ ಹತ್ತಿರದ ಕಾಲೇಜ್ನಲ್ಲಿ ಲೆಕ್ಚರ್ ಆಗಿ ಕೆಲಸ ನಿರ್ವಹಿಸುತ್ತಿದ್ದಳು.

ಒಂದು ವೀಕೆಂಡ್ ಮನು ಊರಿಗೆ ಹೋದಾಗ, ದೂರದ ಧಾರವಾಡದಲ್ಲಿನ ನೆಂಟರೊಬ್ಬರು ಬಂದು ತಂಗಿಯ ಮದುವೆಯ ಬಗ್ಗೆ ಮಾತನಾಡಲು ಬಂದಿದ್ದರು. ಮನೆಗೆ ಇರುವ ಒಂದೇ ಒಂದು ದೀಪದಂತಿರುವ ಅವಳು ಕೂಡ ತಮ್ಮನ್ನು ಅಗಲುವ ಸಮಯ ಬಂತಲ್ಲವೆಂದು ದುಃಖಿಸುವುದೋ ಅಥವಾ ಸಂಭ್ರಮಿಸುವುದಾ ಗೊಂದಲದಲ್ಲಿದ್ದನು ಅವನು. ಮುಂದಿನ ವಾರ ಗಂಡು ಕರೆದುಕೊಂಡು ಬರುವುದಾಗಿ ಹೇಳಿ ಬಂದ ನೆಂಟರು ಹೋದರು. ವಾರ ಕಳೆದು ಮತ್ತೆ ಮನು ವಾಪಸಾದ. ನಕ್ಷತ್ರ ತನ್ನ ಗೆಳೆತಿಯರೊಂದಿಗೆ ಸೀರೆಯುಟ್ಟು ಶೃಂಗಾರಗೊಳ್ಳುತ್ತಿದಳು.

ಅರಗಿಣಿ ಮುದ್ದಿನರಗಿಣಿ ನನ್ನ ತಂಗಿ
ಪುಟ್ಟ ಪುಟ್ಟ ಹೆಜ್ಜೆ ಹಾಕಿ ಅಣ್ಣನೆಡೆ ಬರುತ್ತಿದ್ದ ನನ್ನ ತಂಗಿ
ಇಂದು ಸೀರೆಯುಟ್ಟ ಬೆಳದಿಂಗಳು
ಪಚ್ಚೆ ಹಸಿರ ಸೀರೆಯುಟ್ಟ ಭೂತಾಯಿಯು ಗೌಣ ಕೆಂಪು ಝರಿಯ ಸೀರೆಯುಟ್ಟ ನನ್ನ ತಂಗಿ ಎದುರು
ಆಕಾಶದ ಆ ನಕ್ಷತ್ರ ಉರಿದು ಬೀಳುತಿದೆ ಭುವಿಯಲಿ ಶೃಂಗಾರದಿ ಹೊಳೆವ ಈ ನಕ್ಷತ್ರಳ ಕಂಡು
ಈ ಅಂದಗಾತಿಯ ಚಂದದ ಮಾತಿಗೆ ಜಗ ಮರುಳು
ಅರಗಿಣಿ ಮುದ್ದಿನರಗಿಣಿ ನನ್ನ ತಂಗಿ.

ತಂಗಿಯನ್ನು ನೋಡಲು ಬಂದ ಹುಡುಗನು ಸಹ ದೂರದ ಧಾರವಾಡದ ಯೂನಿವರ್ಸಿಟೀಯಲ್ಲಿ ಅಧ್ಯಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು, ನೋಡಲು ಸ್ಪುರದ್ರೂಪಿಯಾಗಿದ್ದು ನಕ್ಷತ್ರಗೆ ಒಳ್ಳೆಯ ವರನೆಂದು ಇವರಿಗೆ ಅನ್ನಿಸಿತು. ನಕ್ಷತ್ರಳಿಗೂ ಒಪ್ಪಿಗೆ ಬಂದು, ಜಾತಕ ಫಲಗಳು ಕೂಡಿ ಬಂದವು, ಹುಡುಗನ ಮತ್ತು ಅವನ ಕುಟುಂಬದ ಬಗ್ಗೆ ವಿಚಾರಿಸಿದಾಗಲು ಒಳ್ಳೆಯ ಮಾತುಗಳು ಕೇಳಿಬಂದು ಮದುವೆಯೂ ನಿಶ್ಚಯವಾಯಿತು. ಎರಡು ತಿಂಗಳು ಕಳೆದು ಒಂದು ಶುಭ ದಿನದಂದು ಮಹೂರ್ತ ನಿಗದಿಯಾಯಿತು ಮತ್ತು ಮಲೆನಾಡಿನ ವಾಡಿಕೆಯಂತೆ ಇವರ ಮನೆ ಅಂಗಳದಲ್ಲಿಯೇ ಮದುವೆ.
ತಂಗಿಗೆ ಮತ್ತು ಭಾವನಿಗೆ ಬೇಕಾದ ಎಲ್ಲ ಬಂಗಾರ ಮತ್ತು ಬಟ್ಟೆ ಖರೀದಿ, ಎಲ್ಲಾ ನೆಂಟರಿಷ್ಟರಿಗೆ ಬಟ್ಟೆ, ಲಗ್ನ ಪತ್ರಿಕೆ ಹಂಚುವಿಕೆ ಹೀಗೆ ಒಂದೊಂದಾಗಿ ಕೆಲಸಗಳನ್ನು ಮನು ತಂದೆಯೊಡಗೂಡಿ ಮುಗಿಸುತ್ತಾ ಬಂದನು. ಇನ್ನೇನು ಮದುವೆ ಹತ್ತಿರವಾದಂತೆ ಮನೆಯ ಎದುರುಗಡೆ ಮತ್ತು ಹಿಂದೆ ಚಪ್ಪರ ಮಾಡುವ ಕೆಲಸ ಶುರುವಾಯಿತು.  ಊರಿನ ಸಮಸ್ತರೆಲ್ಲಾ   ಬಂದು ಚಪ್ಪರಕ್ಕೆ ಬೇಕಾದ ಅಡಿಕೆ ಮರಗಳು, ಹೊದಿಸಲು ಅಡಿಕೆ ಸೋಗೆ, ಚಪ್ಪರದ ಮೇಲೆ ಅಡ್ಡ ಹೊದಿಸಲು ಬೇಕಾದ ಬಿದಿರಿನ ಬೊಂಬು  ಮತ್ತು ಸೀಳಿದ ಅಡಿಕೆ ಡಬ್ಬೆಗಳು ಹೀಗೆ ಎಲ್ಲಾ ಸಾಮಗ್ರಿಗಳನ್ನು ಸರಿ ಮಾಡಿ ಎರಡೇ ದಿನದಲ್ಲಿ ನೋಡಿದರೆ ಕಣ್ಣಸೂರೆ ಗೊಳಿಸುವ ಹಾಗೆ ಚಪ್ಪರ ಹಾಕಿ ಆಯಿತು.  ಚಪ್ಪರದ ಬಲಭಾಗದಲ್ಲಿ ಅಡಿಕೆ ಕಂಭಗಳಿಂದ ಮಾಡಿದ ಮಂಟಪ,  ಆ ಕಂಭಗಳೆಲ್ಲ ಮಾವಿನಲೆ ಮತ್ತು ತಳಿರು ತೋರಣದಿಂದ ಕಂಗೊಳಿಸುತ್ತಿದೆ. ಹೀಗೆ ವಿಜ್ರಂಭಣೆಯಿಂದ ತಂಗಿಯ ಮದುವೆ ನೆರವೇರಿಸಿದ ಮನುಗೆ ಕೊನೆಯ ದಿನ ತಂಗಿಯನ್ನು ಗಂಡನ ಮನೆಗೆ ಕಳಿಸುವಾಗ ದುಃಖ ತಡೆಯಲಾಗಲಿಲ್ಲ. ಜೊತೆಗೆ ತಂದೆಯು ಇನ್ನೂ ಮನೆಯಲ್ಲಿ ಒಬ್ಬರೇ ಆಗುವರೆಂಬ ಚಿಂತೆ.

ಮದುವೆಯ ಎಲ್ಲ ಕೆಲಸಗಳು ಮುಗಿದು, ಮನೆಯಲ್ಲಿ ಅಡುಗೆ, ಬಟ್ಟೆ ಎಲ್ಲ ಕೆಲಸಗಳಿಗೆ ಒಬ್ಬಳು ಕೆಲಸದವಳನ್ನು ನೇಮಿಸಿ ಮನು ಬೆಂಗಳೂರಿಗೆ ವಾಪಸಾದನು.  ವೀಕೆಂಡ್ಗಳಲ್ಲಿ ಇವನು ಊರಿಗೆ ಹೋಗುತ್ತಾ, ಕೆಲ ವೀಕೆಂಡ್ ತಂದೆಯನ್ನೇ ಬೆಂಗಳೂರಿಗೆ ಕರೆಸಿ ಅವರಿಗೆ ಬೆಂಗಳೂರನ್ನು ತೋರಿಸುತ್ತಾ ಹೀಗೆ ಕಳೆಯುತಲಿತ್ತು  ದಿನಗಳು.

ಹೀಗೆ ತನ್ನ ನೆನಪುಗಳ ಬುಟ್ಟಿಯಿಂದ ಹೊರಬಂದು ಮನು ಟೈಮ್ ನೋಡಿದನು ಸಂಜೆ ೬ ಗಂಟೆಯಾಗಿತ್ತು ಎದ್ದು ಮುಖ ತೊಳೆದು ತನ್ನ ರೂಮ್ ಮೇಟ್ ಜೊತೆ ಪಾರ್ಕ್ನತ್ತ ವಾಯುವಿಹಾರಕ್ಕೆಂದು ಹೊರಟನು. ತಾನು ಒಂದು ಮನೆ ಮಾಡಿ ತನ್ನ ತಂದೆಯನ್ನು ಇಲ್ಲಿಗೆ ಕರೆಸಿಕೊಳ್ಳುವುದು ಉತ್ತಮ ವೆಂದು ಅವನಿಗೆ ಅನ್ನಿಸುತ್ತಲಿತ್ತು. ಹಾಗೆಯೇ ಅದೇ ಯೋಚನೆಯಲ್ಲಿ ಒಂದು ಬೆಂಚಿನ ಮೇಲೆ ಹೋಗಿ ಕೂತನು, ಅಷ್ಟರಲ್ಲಿ ಒಬ್ಬ ವ್ರದ್ದರು ಅಲ್ಲಿ ಬಂದು ಕೂತರು, ನೋಡಿದರೆ ತನ್ನ ತಂದೆಯಷ್ಟೇ ವಯಸ್ಸು, ವೇಷಭೂಷಗಳಿಂದ ಅವರು ಹಳ್ಳಿಯವರೆಂದು ಸ್ಪಷ್ಟವಾಗಿ ಗೋಚರಿಸುತಿತ್ತು. ಅವರ ಮುಖದಲ್ಲಿ ಏನೋ ಒಂದು ತರಹದ ಬೇಸರ ಭಾವ ಮೂಡಿತ್ತು. ಇವನೇ ಅವರನ್ನು ಮಾತಿಗೆಳಿದನು, ಯಾವ ಊರು ಎಲ್ಲಿ ಮನೆ ಹೀಗೆ ಅವರ ಬಗ್ಗೆ ಮಾತನಾಡಲು, ಗೊತ್ತಾಗಿದ್ದೇನೆಂದರೆ
ಅವರು ಶಿವಮೊಗ್ಗದ ಹತ್ತಿರ ಇರುವ ಒಂದು ಹಳ್ಳಿಯವರು, ಅವರ ಸತಿ ಕಾಲವಾಗಿ ೫ ವರುಷಗಳಾಯಿತೆಂದು, ಅವರ ಒಬ್ಬನೇ ಮಗ ಮತ್ತು ಸೊಸೆ ಇಲ್ಲಿ ಬೆಂಗಳೂರಿನಲ್ಲಿ ಕೆಲಸದಲ್ಲಿರುವರೆಂದು ಹೇಳಿದರು. ಅವರಿಬ್ಬರೂ ಬೆಳಿಗ್ಗೆಯೇ ಕೆಲಸಕ್ಕೆ ಹೋದರೆ ಬರುವುದು ರಾತ್ರಿ, ಮನೆಗೆಲಸದವಳು ಬಂದು ಅಡುಗೆ ಮಾಡಿ ಎಲ್ಲ ಕೆಲಸ ಮಾಡಿ ಹೋಗುವಳು. ಇವರು ಮನೆಯಲ್ಲಿ ಒಬ್ಬರೇ ಕಾಲಕಳೆಯಬೇಕು ಮಾಡಲು ಕೆಲಸವೂ ಏನಿಲ್ಲ, ಅಕ್ಕ ಪಕ್ಕದಲ್ಲೂ ಮಾತನಾಡಲು ಸಹ ಯಾರು  ಇರುವುದಿಲ್ಲ, ಸಂಜೆ ಒಮ್ಮೆ ಪಾರ್ಕಿಗೆ ಬಂದು ಇಲ್ಲಿ ಸ್ವಲ್ಪ ಸಮಯ ಕೂತು ಹೋಗುವರು, ಒಬ್ಬನೇ ಇದ್ದು ಬೇಸರ ಎಂದು ತಮ್ಮ ಬಗ್ಗೆ ಹೇಳಿಕೊಂಡರು.
ಆಗ ಮನುಗೆ ತನ್ನ ಆಲೋಚನೆ ಮತ್ತು ತನ್ನ ತಂದೆಯನ್ನು ಇಲ್ಲಿಗೆ ಕರೆಸಿಕೊಳ್ಳುವ ಬಗ್ಗೆ ತಾನು ತೆಗೆದುಕೊಂಡ ತೀರ್ಮಾನದ ಬಗ್ಗೆ ಮತ್ತೊಮ್ಮೆ ಯೋಚಿಸುವಂತಾಯಿತು.

ತನ್ನ ಜೀವನವನ್ನೇ ನಮಗಾಗಿ ಮುಡಿಪಿಟ್ಟು ನಮ್ಮನ್ನು ಸಾಕಿ ಬೆಳೆಸಿದ ಅವರನ್ನು ಈ ಇಳಿವಯಸ್ಸಿನಲ್ಲಿ ಪರಿಚಯವೇ ಇಲ್ಲದ ಈ ಕಾಂಕ್ರೀಟ್ ಕಾಡಿಗೆ ಕರೆ ತಂದು ಅವರಿಗೆ ಬೇಸರವನ್ನುಂಟು ಮಾಡುವದಕ್ಕಿಂತ ನಾನೇ ನನ್ನೂರಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಂಡರೆ ಹೇಗೆ ಎಂಬ ಆಲೋಚನೆ ಅವನಲ್ಲಿ ಮನೆ ಮಾಡಿತು. ಆದರೆ ಇದನ್ನು ಕೇಳಿದ ಜನ ಋಣಾತ್ಮಕವಾಗಿಯೇ ಮಾತನಾಡುವರು ಎಂಬುದು ಅವನಿಗೆ ತಿಳಿದಿತ್ತು. ತಾನು ಬಾಲ್ಯದಲ್ಲಿ ನೋಡಿದ ಮಲೆನಾಡು ಈಗ ತುಂಬಾ ಬದಲಾಗಿದೆ, ಮಳೆಯೇ ಕಡಿಮೆ ಆಗಿ, ಕೃಷಿಯಿಂದ ಜೀವನ ನಡೆಸಬಹುದು ಎಂಬ ನಂಬಿಕೆಯೇ ನಶಿಸಿದೆ, ಎಲ್ಲಾ ಹುಡುಗರು ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದಾರೆ, ಕೆಲಸಕ್ಕೆ ಜನ ಸಿಗುವುದೇ ಕಷ್ಟ , ಇಷ್ಟೆಲ್ಲಾ ಕಠಿನತೆಗಳನ್ನು ಎದುರಿಸಿ ನಿವಾರಿಸುವ ಧೈರ್ಯ ಇದ್ದರೆ ಮಾತ್ರ ಕೃಷಿ ಎಂಬ ಅರಿವಿನೊಂದಿಗೆ ತನ್ನ ತಂದೆಗೆ ಎಲ್ಲ ತಿಳಿಸಿ ತಾನು ಊರಿಗೆ ವಾಪಸಾಗುವ ನಿರ್ಣಯ ತೆಗೆದುಕೊಂಡನು ಮನು.  ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ತನ್ನ ಆರೇಳು ವರ್ಷದ ಬೆಂಗಳೂರಿನ ಜೀವನದಲ್ಲಿ ಜೊತೆಗಿದ್ದ ಎಲ್ಲರಿಗೂ ವಿದಾಯ ಹೇಳಿ ಬಾಳಿನ ಹೊಸ  ಅಧ್ಯಾಯದ ನಿರೀಕ್ಷೆಯಿಂದ ಮಲೆನಾಡಿನತ್ತ ಮುಖ ಮಾಡಿದನು ಮನು.

---------------ಮುಕ್ತಾಯ---------------------------------------------------------------------------

Sunday, March 12, 2017

ಬಣ್ಣ

ಹುಣ್ಣಿಮೆ ಚಂದಿರನ ಮಗಳಾದ ನನ್ನೊಲವಿನ ನಲ್ಲೆಯೊಡನೆ ಬಣ್ಣದೋಕುಳಿಯ ಆಡಲೇ
ಮುದ್ದಾದ ಹಣೆಗೆ ಚುಂಬಿಸಿ ಕೆಂಬಣ್ಣವ ಹಚ್ಚಲೇ
ಗುಲಾಬಿಯಂತಿರುವ ಕೆನ್ನೆಯ ಗಿಲ್ಲಿ ರಂಗೇರಿಸಲೇ
ಹಸಿರಿನಂತೆ ಕಂಗೊಳಿಸುವ ಕೇಶರಾಶಿಗೆ ಯಾವ ಬಣ್ಣವ ಎರಚಲಿ
ನಿರ್ಮಲ ಆಗಸದಂತಿರುವ ಆಕೆಯ ಮೇಲೆ ಕಾಮನ ಬಿಲ್ಲನು ಮೂಡಿಸಲೇ
ನಾನಿಲ್ಲಿ ಅವಳ ಆಲೋಚನೆಯಲಿ ಮುಳುಗಿರಲು ಅವಳಲ್ಲಿ ತನ್ನದೇ ಲೋಕದಲಿ ನನ್ನಿರುವಿಕೆಯ ಪರಿವೆಯೇ ಇಲ್ಲದಂತಿರುವಳು ನಾನೇನು ಮಾಡಲೇ
ಆದರೇನಂತೆ ಅವಳಿಗೆ ನನ್ನ ಎದೆಯ ರಂಗಿನೋಕುಳಿಯ ಚೆಲ್ಲುತಿರುವೆ
ಈ ಅಂದಗಾತಿ ಇದನಾದರೂ ಓದುವಳೇ

Friday, February 24, 2017

ಮಲೆನಾಡು ಡೈರಿ- 2

ಮನುವಿನ ತಂದೆ ನೀಲಕಂಠಯ್ಯನವರು ಚಿಕ್ಕ ಹಿಡುವಳಿದಾರರು, ತಮಗಿರುವ ಅಲ್ಪ ಜಮೀನಿನಲ್ಲೇ ಸತಿಪತಿ ಸೇರಿ, ಕಷ್ಟ ಪಟ್ಟು ದುಡಿದು, ಒಂದು ಚಿಕ್ಕ ಸೂರನ್ನು ಕಟ್ಟಿಕೊಂಡು ನೆಮ್ಮದಿಯ ಬದುಕು ಕಂಡವರು. ಎಲ್ಲ ಪೋಷಕರ ಹಾಗೆ ಅವರ ಮಹದಾಸೆ ತನ್ನ ಮಗ ಚೆನ್ನಾಗಿ ಓದಿ  ಸಮಾಜದಲ್ಲಿ ಒಳ್ಳೆಯ ಹುದ್ದೆ ಅಲಂಕರಿಸಲಿ ಎಂದು. ತಮಗೆ ಕಷ್ಟವಾದರೂ ಇಬ್ಬರೂ ಮಕ್ಕಳನ್ನು ಓದಿಸುವರು ಅವರು 

ಒಂದು ದಿನ ಇದ್ದಕ್ಕಿದ್ದ ಹಾಗೆ ತೋಟದಲ್ಲಿ ಕೆಲಸ ಮಾಡುವಾಗ ಕುಸಿದು ಬಿದ್ದರು ಅವನ ತಾಯಿ.
ಚಿಕ್ಕ ವಯಸಿನಲ್ಲೇ ಮದುವೆ ಆಗಿ ತನ್ನ ದೊಡ್ಡ ಕುಟುಂಬದಿಂದ ಇಲ್ಲಿಗೆ ಬಂದ ಹೆಣ್ಣು ಅವನ ತಾಯಿ ಕೌಸಲ್ಯ. ಅವರ ತಂದೆಯ ಕುಟುಂಬಕ್ಕೆ ಹೋಲಿಸಿದರೆ ನೀಲಕಂಠಯ್ಯನವರ ಕುಟುಂಬ ಚಿಕ್ಕದು ಮೂವರು ಸಹೋದರರು ಮತ್ತು ಒಬ್ಬಳೇ ಸಹೋದರಿ, ಹೇಳಿಕೊಳ್ಳುವಂತ ದೊಡ್ಡ ಸ್ಥಿತಿವಂತರೆನಲ್ಲ, ಇರುವುದರಲ್ಲೇ ಅಚ್ಚುಕಟ್ಟಾಗಿ ಜೀವನ ನಡೆಸಿಕೊಂಡು ಹೋಗುತ್ತಿರವವರು ನೀಲಕಂಠಯ್ಯನವರ ಅಪ್ಪ.  ಕೌಸಲ್ಯಾಳ ತಂದೆ ಊರಿಗೆ ದೊಡ್ಡ ಕುಳವೇ, ಹತ್ತಾರು ಎಕರೆ ಜಮೀನು, ತೆಂಗಿನ ತೋಟ, ಅಡಿಕೆಯ ತೋಟ, ಹಳೆಯ ಕಾಲದ ದೊಡ್ಡ ಮನೆ, ಅವರಿಗೆ 7 ಜನ ಗಂಡು ಮಕ್ಕಳು, ಮತ್ತು 2 ಹೆಣ್ಣು. ಕೌಸಲ್ಯಾ 5 ನೆಯವಳು.
ತಂದೆಯ ಮನೆಯಲ್ಲಿ ಆಡುತ್ತಾ ಬೆಳೆದ ಹುಡುಗಿಗೆ ಮೊದ ಮೊದಲು ನೀಲಕಂಠಯ್ಯ ನವರ ಮನೆಗೆ ಬಂದಾಗ ತುಸು ಕಷ್ಟವೇ ಆಯಿತು. ತಂದೆಯ ಮನೆಯಲ್ಲಿ ಬರೀ ಅಡುಗೆ ಮಾತ್ರ ಕಲಿತವಳು ಅವಳು, ಇಲ್ಲಿಗೆ ಬಂದ ಮೇಲೆ ತನ್ನ ಓರಗೆಯವರಂತೆ ಅಡುಗೆ ಮನೆ, ಕೊಟ್ಟಿಗೆಯ ದನಕರುಗಳ ಕೆಲಸ, ಗದ್ದೆ - ತೋಟದಲ್ಲಿ ಕಳೆ ಕೀಳುವುದು, ಅಡಿಕೆ ಸುಲಿಯುವುದು ಎಲ್ಲ ಹೊಸ ಕೆಲಸಗಳೇ ಆಕೆಗೆ. ಇನ್ನು ಬೇಸಿಗೆಯ ಬೆಳೆಗಳಾದ ಶೇಂಗಾ, ಹೆಸರು ಮುಂತಾದ ಕಾಳುಗಳ ಬೆಳೆವ ಸಮಯದಲ್ಲೂ ಮನೆಯ ಹೆಂಗಸರು ಕೈ ಜೋಡಿಸುತ್ತಿದ್ದರು. ಮದುವೆಯ ಹೊಸತರಲ್ಲಿ ಇವಳನ್ನು ಕೆಲಸಕ್ಕೆ ಅಷ್ಟೇನೂ ಕರೆಯುತ್ತಿರಲಿಲ್ಲವಾದರೂ, ವರ್ಷ ಕಳೆಯುವುದರೊಳಗೆ ತಾನೇ ಎಲ್ಲ ಕೆಲಸಗಳಲ್ಲೂ ಭಾಗಿಯಾಗತೊಡಗಿದಳು ಅವಳು.



ನೀಲಕಂಠಯ್ಯನವರ ತಂದೆಯ ನಿಧನದ ನಂತರ ಇವರು ಮಧ್ಯದ ಮಗನಾದರೂ ಮನೆಯ ಯಜಮಾನಿಕೆ ಇವರಿಗೇ ಬಂದಿತ್ತು, ಅದಕ್ಕೆ ಕಾರಣ ಇವರ ಅಣ್ಣ ಅಷ್ಟೇನೂ ಮನೆಯ ಕಡೆ ಜವಾಬ್ದಾರಿ ಬಗ್ಗೆ ತಲೆ ಹಾಕುತ್ತಿರಲಿಲ್ಲ, ಅವರಪ್ಪನೊಂದಿಗೆ ಎಲ್ಲ ಕೆಲಸಗಳಲ್ಲೂ ಭಾಗಿಯಾಗಿ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದುದು ನೀಲಕಂಠಯ್ಯನವರೇ, ಅವರೇ ತನ್ನ ಸಹೋದರಿ ಮತ್ತು ಎಲ್ಲ ಸಹೋದರರ ಮದುವೆ ಮಾಡಿ ಮುಗಿಸಿ ಕೊನೆಯಲ್ಲಿ ಕೌಸಲ್ಯಾಳ ಕೈ ಹಿಡಿದಿದ್ದುಮದುವೆ ಆದ ಹೊಸತರಲ್ಲಿ ಚೆನ್ನಾಗೇ ಇದ್ದ ಕೂಡುಕುಟುಂಬದಲ್ಲಿ ಸಣ್ಣ ಬಿರುಕುಗಳು ಮೊದಲು ಅಡುಗೆ ಮನೆಯಿಂದಲೇ ಶುರುವಾದವು, ಬಿರುಕುಗಳನ್ನು ಮುಚ್ಚುವ ಎಲ್ಲ ಪ್ರಯತ್ನಗಳು ವಿಫಲವಾಗಿ ಮನೆಯು ವಿಭಜನೆಯ ಸಲುವಾಗಿ ಊರ ಹಿರಿಯರ ಮುಂದೆ ಬಂದು ನಿಂತಿತು. ಮನೆಯು ಇಬ್ಭಾಗವಾಗಿ ಇಬ್ಬರು ಸಹೋದರರ ಪಾಲಾಯಿತು ಮತ್ತು ಮನೆಯ ಮೇಲೆ ಇರುವ ಸ್ವಲ್ಪ ಸಾಲವನ್ನು ಅವರಿಬ್ಬರೇ ತೀರಿಸಿಕೊಳ್ಳಬೇಕೆಂದು, ನೀಲಕಂಠಯ್ಯನವರು ಹೊಸ ಮನೆ ಕಟ್ಟಿಕೊಳ್ಳುವುದೆಂದು ತೀರ್ಮಾನವಾಯಿತುಇನ್ನು ಇರುವ ಮೂರೆಕೆರೆ ಗದ್ದೆ ಮತ್ತು ಒಂದೆಕೆರೆ ತೋಟ ಎಲ್ಲರಿಗೂ ಸಮ ಪಾಲಾಯಿತು.



ಗಂಡ ಹೆಂಡತಿ ಇಬ್ಬರೂ ಕಷ್ಟಪಟ್ಟು, ಇತರರ ನೆರವಿನೊಂದಿಗೆ ವರುಷದೊಳಗೆ ಹೊಸಮನೆಯನ್ನು ಕಟ್ಟಿ ಹಾಲುಕ್ಕಿಸಿದರು. ಮನೆಯ ಎದುರಿಗೆ ವಾಡಿಕೆಯಂತೆ ಕುಳಿತುಕೊಳ್ಳಲು  ಕಟ್ಟೆ, ಮರಳು, ಮಣ್ಣು ಮತ್ತು ಸುಣ್ಣ ಮಿಶ್ರಣದಿಂದ ಕಟ್ಟಿದ ಗೋಡೆಗಳು, ಮನೆಯ ನಾಲ್ಕೂ ಮೂಲೆ ಮತ್ತು ನಾಲ್ಕೂ ಬಾಹುಗಳ ಮದ್ಯೆ ಮಾತ್ರ ಕೆಂಪು ಕಲ್ಲಿನಿಂದ ನಿರ್ಮಿತ ಮುಂಡಿಗೆಗಳು, ಬಿದಿರಿನ ಬೊಂಬುಗಳ ಓಡು ಮತ್ತು ಅವಗಳನ್ನು ಹಿಡಿದು ಕೂರಿಸಲು ಮುಂಡಿಗೆಗಳ ಮೇಲೆ ಕೂತಿರುವ ತೊಲೆಗಳು, ಮೇಲೆ ಮಂಗಳೂರು ಹಂಚುಗಳು. ಜೇಡಿಮಣ್ಣನ್ನು ನಯವಾಗಿ ವರೆದು ಮಾಡಿದ ನೆಲ, ಅದರ ಮೇಲೆ ಸಗಣಿಯಿಂದ ಸಾರಣೆ ಆಗಿದೆ. ಹೀಗೆ ಚಿಕ್ಕವಾದರೂ ಚೊಕ್ಕವಾಗಿರುವ ಮನೆ ಅವರದು. ಮನೆ ಕಟ್ಟುವ ಸಮಯದಲ್ಲಿನ್ನೂ ಆಗಷ್ಟೇ ನಡೆಯುವುದ ಕಲಿತ ಹುಡುಗ ಮನು, ಮಣ್ಣಿನಲ್ಲಿ ಆಟ ಆಡುವಾದೇ ಅವನ ದಿನಚರಿ. ಹೊಸ ಮನೆಗೆ ಬಂದ ಸವಿಗಳಿಗೆಯನ್ನು ಸವಿಯುತ್ತಿರುವಾಗಲೇ ನೀಲಕಂಠಯ್ಯನವರಿಗೆ ಇನ್ನೊಂದು ಸಕ್ಕರೆಗಿಂತ ಸವಿಯಾದ ವಾರ್ತೆ ಕೌಸಲ್ಯಾಳಿಂದ ಬಂದಿತು, ಕೌಸಲ್ಯಾ ಎರಡನೇ ಮಗುವಿನ ರೂಪನ್ನು ಹೊತ್ತ ಫಲವತಿಯಾಗಿದ್ದಳು. ನೀಲಕಂಠಯ್ಯನವರು ಇಮ್ಮಡಿ ಪ್ರೀತಿಯಿಂದ ಸತಿಗೆ ಎಲ್ಲ ಕಾರ್ಯಗಳಲ್ಲಿ ನೆರವಾಗುತ್ತಿದ್ದರುಆದರೆ ಮನುವಿನ ಬಾಲ್ಯ ಸಹಜ ಪ್ರಶ್ನೆಗಳಿಗೆ ಉತ್ತರಿಸದಾದರು, "ಅಮ್ಮನಿಗೆ ಏನಾಗಿದೆ ಹೊಟ್ಟೆ ಉಬ್ಬುತ್ತಿದಿಯೆಲ್ಲ ಎಂದು ತೊದಲು ನುಡಿಯಲ್ಲಿ ಪ್ರಶ್ನಿಸುವನು", "ಅಲ್ಲಿ ಪುಟ್ಟ ಮಗುವೊಂದಿದೆ ನಿನ್ನೊಡನೆ ಆಡಲು ಬರುತ್ತದೆ ಕೆಲ ದಿನಗಳು ತಡೆ" ಎಂದರೆ, "ಅದು ಅಲ್ಲಿ ಹೇಗೆ ಹೋಯಿತು" ಎನ್ನುವನು. "ಹಾಗಾದರೆ ದೊಡ್ಡಪ್ಪನ ಹೊಟ್ಟೆಯಲ್ಲೂ ಮಗುವಿದೀಯೆ ಅವರ ಹೊಟ್ಟೆಯೂ ದೊಡ್ಡದಾಗುತ್ತಿದೆ" ಹೀಗೆ ಅವನ ಪ್ರಶ್ನೆಗಳ ಸಾಗರವೇ ಏಳುತ್ತಿತ್ತು

ಅವರ ಎರಡನೇ ಹೆರಿಗೆಯು ನಮ್ಮೂರಲ್ಲೇ ಆಗಲಿ ಎಂಬ ತವರಿನ ಆಸೆ ಮತ್ತು ಕೌಸಲ್ಯಾಳ ಆಸೆಯಂತೆ, ಅವಳ ಹಿರಿಯ ಅಣ್ಣನೊಂದಿಗೆ ಕೌಸಲ್ಯ ಮತ್ತು ಮನುವಿನ ಸವಾರಿ ಅವನ ಅಜ್ಜನ ಮನೆ ಕಡೆ ಸಾಗಿತು. ತವರಿನಲ್ಲಿ ಅಜ್ಜಿ, ಅತ್ತಿಗೆಯರ ಪ್ರೀತಿ ಆರೈಕೆಯಲ್ಲಿ ಕೌಸಲ್ಯಾಳ ಹೆರಿಗೆ ಸುಸೂತ್ರವಾಗಿ ಜರುಗಿ ನಕ್ಷತ್ರಳಾ ಜನನವಾಯಿತು, ಮನುವು ಮೊದ ಮೊದಲು ಇದೇನಿದು ಮಗು ಚಿಕ್ಕದಾಗಿ ಬಿಳಿ ಹೆಗ್ಗಣದಂತಿದೆ ಎಂದು ಹತ್ತಿರವೇ ಬರುತ್ತಿರಲಿಲ್ಲ. ಹೀಗಂದ ಮನುಗೆ ಬಾಣಂತನ ಮುಗಿಸಿ ವಾಪಸಾದ ಮೇಲೆ ತಂಗಿಯ ಜೊತೆ ಆಡುವುದೇ ದಿನಾಚಾರಿಯಾಯಿತು


ಮಕ್ಕಳಿಬ್ಬರೂ ಬೆಳೆಯುತ್ತಾ ಅವರ ಮನೆಯ ಖರ್ಚು ವೆಚ್ಚಗಳ ಭರಿಸಲೆಂದು, ಪತಿಗೆ ವ್ಯವಸಾಯದಲ್ಲಿ ಕೈ ಜೋಡಿಸುವುದರ ಜೊತೆ ಜೊತೆಗೆ ಮಲೆನಾಡಿನ ಸಹಜ ತಿಂಡಿಗಳಾದ ಹಲಸು, ಬಾಳೆಕಾಯಿ ಚಿಪ್ಸ್, ಹಪ್ಪಳ, ಸಂಡಿಗೆ, ಮುಂತಾದನೇಕ ತಿಂಡಿಗಳ ತಯಾರಿಸಿ ಅಂಗಡಿ, ಬೇಕರಿಗಳಿಗೆ ಮಾರ ತೊಡಗಿದರು ಕೌಸಲ್ಯ.
ಹೀಗೆಯೇ ವರುಷಗಳುರುಳಿ ಮನು ಹೈ ಸ್ಕೂಲ್ ಮುಗಿಸುವುದರೊಳಗೆ  ಸತಿ ಪತಿಗಳ ಸಹ ದುಡಿಮೆಯಿಂದ, ಅವರ ಮನೆ ಹೊಸ ರೂಪು ಪಡೆದಿತ್ತು.   ಸಮಯದಲ್ಲಿ ಕೌಸಲ್ಯಾಳಿಗೆ ಕೆಲವೊಮ್ಮೆ ಎದೆ ನೋವು ಬರುತ್ತಿತ್ತು ಆದರೆ ಅದನ್ನವರು ನಿರ್ಲಕ್ಷಿಸಿದ್ದರು. ನಿರ್ಲಕ್ಷವು  ರಕ್ಕಸ ರೂಪ ತಾಳಿ ಅವರ ಮೇಲೆ ಎಗರುವ ಉತ್ಸಾಹದಲ್ಲಿತ್ತು

ಅಂದು ತೋಟದಲ್ಲಿ ಕೆಲಸ ಮಾಡುವಾಗ ಕುಸಿದು ಬಿದ್ದ ಕೌಸಲ್ಯಾಳನ್ನು ಆಸ್ಪತ್ರೆಗೆ ಕರೆದೊಯ್ಯುವುದಾರೊಳಗೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತುಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಕ್ಕೆ ಸಿಡಿಲೆಗರಿದಂತೆ ಅವರ ಬಾಳಿಗೆ ಎಗರಿತು ಜ್ವಾಲೆ.  ತನ್ನೊಡನೆ ಬಾಳ ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದವಳು ಇಂದು ನಡುಗಡ್ಡೆಯಲ್ಲಿ ತನ್ನ ಬಿಟ್ಟೋದಳೆಂದು ಕಣ್ಣೀರ ಸಾಗರವೇ ನೀಲಕಂಠಯ್ಯನವರ ಕಣ್ಣಿನಿಂದ ಉಕ್ಕುತ್ತಿತ್ತು. ಅವರ ಸ್ಥಿತಿಯೇ ಹೀಗಿರುವಾಗ ಮಕ್ಕಳ ದುಃಖ ಕೇಳುವರಾರು, ಸಮಾಧಾನ ಪಡಿಸುವರಾರು.


ಮುಂದುವರೆಯುವುದು....