Monday, May 1, 2017

ಮಲೆನಾಡು ಡೈರಿ - 3


ಜಗವ ಬಿರಿವ ನೋವನು ಒಡಲಾಳದಲಿ ನುಂಗಿ ಜನ್ಮವಿತ್ತವಳು ಅವಳು
ಎದೆಹಾಲುಣಿಸಿ , ಕೈ ತುತ್ತ ತಿನಿಸಿ ಖುಷಿ ಪಟ್ಟ ನಿಸ್ವಾರ್ಥಿ ಅವಳು
ನಮ್ಮ ಹಸಿವ ನೀಗಿಸುವುದರಲಿ ತನ್ನ ಹಸಿವ ಮರೆತವಳು ಅವಳು
ನಮ್ಮ ನೋವಿಗೆ ಕಣ್ಣೇರಾದವಳು ಆಕೆ
ಕಿವಿಯ ಹಿಂಡಿ ಬದುಕ ಕಲಿಸಿದವಳು ಅವಳು
ಜಗದೆದುರು ನಮ್ಮ ರಕ್ಷಿಸುವ ವಜ್ರಕವಚ ಅವಳು
ಅವಳಿಗಾರು ಸರಿಸಾಟಿ ಜಗದಲಿ, ಅವಳಿಲ್ಲದೆ ಜಗವಿಲ್ಲ.

ಮನೆಯ ನಂದಾದೀಪವೇ ಆರಿ ಹೋಗಿ ಕತ್ತಲೆ ಆವರಿಸಿತು ಮನೆಯಲ್ಲಿ, ತಾಯಿಯ ಕಳೆದುಕೊಂಡು ಮಂಕಾದ ಮಕ್ಕಳು, ಕೌಸಲ್ಯಾಳ ನೆನಪಲ್ಲೇ ದಿನಗಳು ಉರುಳುತ್ತಿದ್ದವು. ಕೌಸಲ್ಯಾಳ ತಂಗಿ ಕೆಲದಿನಗಳ ಕಾಲ ಅಲ್ಲೇ ಇದ್ದು ಮನೆಗೆಲಸ ನಿಭಾಯಿಸಿದಳು. ಯಾರಾದರೂ ಎಷ್ಟು ದಿನ ಸಹಾಯ ಮಾಡಿಯಾರು ಅವರಿಗೂ ಅವರದೇ ಸಂಸಾರವಿಲ್ಲವೇ. ಚಿಕ್ಕಮ್ಮ ತನ್ನೂರಿಗೆ ಹೋದ ಮೇಲೆ ನಕ್ಷತ್ರಳೆ ಎಲ್ಲ ಕೆಲಸಗಳ ಜವಾಬ್ದಾರಿ ವಹಿಸಿಕೊಂಡಳು. ನಮ್ಮವರು ಕಾಲವಾದರೆಂದು ಕಾಲ ನಿಲ್ಲುವುದೇ, ಕಾಲ ಕಳೆದು ಹೋದಂತೆ ತಂಗಿಯೇ ತಾಯಿಯಾದಳು ಮನೆಗೆ.  ತಮ್ಮ ಓದಿನೊಂದಿಗೆ ಮನೆಯನ್ನು ನಿಭಾಯಿಸುವುದ ಕಲಿತರು ಮನು ಮತ್ತು ನಕ್ಷತ್ರ.  ನಕ್ಷತ್ರ ಬೆಳಿಗ್ಗೆಯೇ ಬೇಗ ಎದ್ದು ಮನೆಯ ಕಸ ಗುಡಿಸಿ, ಅಂಗಳದಲ್ಲಿ ರಂಗೋಲಿ ಹಾಕಿ, ಹಸು ಕರುಗಳಿಗೆ ಮೇವು ಹಾಕಿ, ಹಾಲು ಕರೆದು, ಸ್ನಾನ ಪೂಜೆ ಮುಗಿಸಿ ತಿಂಡಿ ರೆಡೀ ಮಾಡುವಳು. ಅಷ್ಟರಲ್ಲೇ ಮನು ತಂದೆಯೊಡಗೂಡಿ ಕೊಟ್ಟಿಗೆಗೆ ಹಾಸಲು ದರಕನ್ನೊ ಅಥವಾ ಹಸಿ ಸೊಪ್ಪನ್ನು ತಂದು, ಕೊಟ್ಟಿಗೆಯ ಶುಚಿಗೊಳಿಸಿ, ಸೊಪ್ಪು ಹಾಸಿ ಬಂದು ಸ್ನಾನ ಮುಗಿಸಿ ರೆಡಿ ಆಗಿ ಕರೆದ ಹಾಲನ್ನು ಡೈರಿಗೆ ಹಾಕಿ ಬರುವನು. ಮೂವರು ಕೂಡಿ ತಿಂಡಿ ಮುಗಿಸಿ ಮನು ನಕ್ಷತ್ರಳನ್ನು ಹೈಸ್ಕೂಲ್ಗೆ ಬಿಟ್ಟು ತನ್ನ ಕಾಲೇಜ್ ಸೇರುವನು. ಇದು ನಿತ್ಯದ ಅವರ ಕಾಯಕವಾಯಿತು.


 ಮನು ಬಿಕಾಂ ಮೊದಲನೇ ವರ್ಷಕ್ಕೆ ಕಾಲಿಡುವ ಜೊತೆ ಜೊತೆಗೆ ಮನೆಯ ಎಲ್ಲ ಕೆಲಸಗಳಲ್ಲಿ ತಂದೆಗೆ ಸಹಾಯವಾಗಿ ನಿಂತನು. ಮಳೆಗಾಲದ ಆರಂಭವಾಗುವ ಮುಂಚೆ ತಂದೆ ಮಕ್ಕಳಿಬ್ಬರೂ ಸೇರಿ ತೋಟದ ಕಾಜಿಗೆಗಳನ್ನು ನೀರು ಹರಿದಾಡಲು ಅನುವಾಗಾವಂತೆ ಕ್ಲೀನ್ ಮಾಡಿ, ಈಗಾಗಲೇ ಫಲ ಕೊಟ್ಟ ದೊಡ್ಡ ಬಾಳೆಗಿಡಗಳ ಕಿತ್ತು ಅದರ ಜಗದಲ್ಲಿ ಬಾಳೆ ಸಸಿಗಳನ್ನು ನೆಟ್ಟು ಮುಗಿಸಿದರು. ಅಡಿಕೆ ಕೊನೆಗಳಿಗೆ ಸುಣ್ಣ ತುತ್ತ ಮಿಶ್ರಿತ ಔಷಧಿ ಸಿಂಪಡಿಸಿ ತೋಟದ ಕೆಲಸ ಮುಗಿಸಿದರು. ಅಷ್ಟರಲ್ಲಾಗಲೇ ಆರಿದ್ರಾ ಮಳೆ ಪ್ರಾರಂಭವಾಗಿತ್ತು. ಮಲೆನಾಡಿನ ವಾಡಿಕೆಯಂತೆ ಆರಿದ್ರಾ ಮಳೆಯ ಸಂಧರ್ಭದಲ್ಲಿ ಶುಭ ಸೋಮವಾರದ ದಿನ ಊರಿನಲ್ಲಿ, ಜಮೀನಿನ ಹತ್ತಿರದಲ್ಲಿ ಎಲ್ಲಾ ಕಡೆ ಇರುವ ದೇವದೇವತೆಗಳಿಗೆ ಊರಿನವರೆಲ್ಲಾ ಸೇರಿ ಪೂಜೆ ಹಣ್ಣುಕಾಯಿ ಮಾಡಿ, ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿ ಆರಿದ್ರಾಮಳೆಹಬ್ಬ ಆಚರಿಸಿದರು. ಮಳೆಗಾಲದ ಮೊದಲ ಮಳೆ ಅದು ಆದ್ದರಿಂದ ಎಲ್ಲಾ ದೇವರಿಗೆ ಪೂಜಿಸಿ ಅವರ ಅನುಗ್ರಹದಿಂದ ಮಳೆಗಾಲ ಚೆನ್ನಾಗಿ ಆಗಲಿ ಎಂಬ ಒಂದು ನಂಬಿಕೆ.  ನಂತರ ಸಿಡಿಲು ಗುಡುಗುಗಳ ಆರ್ಭಟದೊಂದಿಗೆ ಶುರುವಾದ ಮಳೆರಾಯ ಎರಡು ವಾರವಾದರೂ ಬಿಡುವಿಲ್ಲದೆ ಸುರಿದನು. ಹಾಗೆಯೇ ಭಾನುವಾರದಂದು ಛತ್ರಿ ಹಿಡಿದು ತಮ್ಮ ಗದ್ದೆಬಯಲನ್ನು ನೋಡಲು ಹೋದ ಮನುಗೆ ಅದು ನೀರಿನಿಂದ ತುಂಬಿ ಸಮುದ್ರದಂತೆ ಭಾಸವಾಯಿತು. ಬಿರುಗಾಳಿಯಂತೆ ಬೀಸುವ ಗಾಳಿಗೆ ಛತ್ರಿ ಅಲ್ಲೋಲ ಕಲ್ಲೋಲವಾಗುತಿತ್ತು.  ಗದ್ದೆಯ ತುಂಬಾ ಏಡಿ, ಕಪ್ಪೆ ತುಂಬಿದ್ದವು, ಕಪ್ಪೆಗಳು ವಟಗುಟ್ಟುತ್ತಾ ಉಲ್ಲಾಸದಿಂದ ಪುಟಿದಾಡುತ್ತಿದ್ದವು. ಕಪ್ಪೆಗಳ ನೋಡಿ ನೀರಹಾವುಗಳು ಭಕ್ಷ ಭೋಜನ ಸಿಕ್ಕಿತೆಂದು ನಲಿಯುತ್ತಾ ನೀರ ಮೇಲೆ ಓಡುತ್ತಿದ್ದವು. ಅಲ್ಲೇ ಪಕ್ಕದಲ್ಲಿ ದೊಡ್ಡ ದೊಡಾ ಏಡಿಗಳನ್ನು ಹಿಡಿದು ಮದ್ಯಾನ್ಹದ ಊಟಕ್ಕೆ ಚೀಲ ಸೇರಿಸುತ್ತಿದ್ದ ಹುಡುಗರು ಇದ್ದರು. ಹೀಗೆಯೇ ಒಂದು ಸುತ್ತು ಹಾಕಿ ಅವನು ಮನೆಗೆ ಹಿಂದಿರುಗಿದನು.

ಮನು ಉತ್ತಮ ದರ್ಜೆಯಲ್ಲಿ ಬೀ ಕಾಂ ಪಾಸ್ ಮಾಡಿ ಎಂ ಬಿ ಎ ಮಾಡಲು ಊರಿನಿಂದ ಮೊದಲ ಬಾರಿ ಪರ ಊರಿಗೆ ಪಯಣ ಬೆಳಸಿದನು. ನಕ್ಷತ್ರ ಆಗಲೇ ಪಿಯುಸಿ ಓದುತ್ತಿದ್ದಳು. ಮೊದ ಮೊದಲು ತನ್ನ ತಂಗಿ, ತಂದೆ ಹೀಗೆ ಊರಿನ ನೆನಪುಗಳಲ್ಲೆ ಇರುತ್ತಿದ್ದ ಅವನ ಚಿತ್ತ ಗೆಳೆಯರ ಗುಂಪು ಹೆಚ್ಚಾದಂತೆ ಕಣ್ಮರೆಯಾಗುತ್ತಾ ಹೋಯಿತು. ಎರಡು ವರ್ಷದ ಓದು, ಹಾಸ್ಟೆಲ್ ರೂಮಿನ ಹಾಳು ಹರಟೆಗಳು, ಕಾಲೇಜ್ ಕ್ಯಾಂಟೀನ್ನಲ್ಲಿನ ಬೈಟು ಚಾಯ್ ಮತ್ತು ಮಿರ್ಚಿಗಳು, ಲ್ಯಾಪ್ಟಾಪ್ ನಲ್ಲಿನ ಕೌಂಟರ್  ಸ್ಟ್ರೈಕ್ ಮತ್ತು ಎನ್ ಎಫ್ ಎಸ್ ಗೇಮ್ಗಳು, ಎಗ್ಸ್ಯಾಮ್ ಹಿಂದಿನ ದಿನದ ನೈಟ್ ಔಟ್ ಗಳಲ್ಲಿ ಮುಗಿದಿದ್ದೇ ಗೊತ್ತಾಗಲಿಲ್ಲ. ಓದು ಮುಗಿಸಿ ಕ್ಯಾಂಪಸ್ ಡ್ರೈವ್ ನಲ್ಲಿ ಕೆಲಸ ಗಿಟ್ಟಿಸಿದ ಮನು, ಫೈನಲ್ ಎಗ್ಸ್ಯಾಮ್ ಮುಗಿಸಿ ಊರಿಗೆ ಬಂದು ಬೆಂಗಳೂರಿಗೆ ಹೋಗುವ ತಯಾರಿಯಲ್ಲಿ ತೊಡಗಿದನು.

ಮಜೆಸ್ಟಿಕ್ನ ಆ ಜನಸಾಗರವನ್ನು ದಾಟಿ ಪ್ಲ್ಯಾಟ್‌ಫಾರ್ಮ್ ಹುಡುಕಿ ತನ್ನ ಕಾಲೇಜಿನ ಗೆಳೆಯರ  ಪೀಜಿ ಸೇರುವುದರೊಳಗೆ ಹೈರಾಣಾದನು.  ಕಾರ್ಪೊರೇಟ್ ಜಗತ್ತಿನ ಹೊಸ ರೀತಿ ರಿವಾಜುಗಳನ್ನು ಕಲಿಯುತ್ತಾ, ವೀಕೆಂಡ್ಗಳಲ್ಲಿ ಬಿಎಂಟಿಸಿ ದಿನದ ಪಾಸ್ಸಿನ ಸಂಪೂರ್ಣ ಉಪಯೋಗ ಮಾಡಲೇಬೇಕೆಂದು ಪಣ ತೊಟ್ಟವರಂತೆ ಬೆಂಗಳೂರಿನ ಮೂಲೆ ಮೂಲೆಗಳನ್ನು ಜಾಲಾಡಿಸಿ ಆಯಿತು ಗೆಳೆಯರೊಂದಿಗೆ.  ಇರುವ ಮಾಲ್ಗಳು, ಶಾಪಿಂಗ್ ಸೆಂಟರ್ಗಳು, ಹೊಸ ಹೊಸ ಚಲನಚಿತ್ರಗಳು, ತಿಂಗಳಿಗೊಮ್ಮೆ ಊರಿನ ಪಯಣ ಹೀಗೆ ಸಾಗಿತು ಅವನ ಬೆಂಗಳೂರಿನ ಜೀವನ. ಬೆಂಗಳೂರಿನಲ್ಲಿ ಇವನು 4 ವರ್ಷದ ಜೀವನ ಮುಗಿಸುವುದರೊಳಗೆ ತಂಗಿಯೂ ಮಾಸ್ಟರ್ಸ್ ಮುಗಿಸಿ ಅಲ್ಲೇ ಹತ್ತಿರದ ಕಾಲೇಜ್ನಲ್ಲಿ ಲೆಕ್ಚರ್ ಆಗಿ ಕೆಲಸ ನಿರ್ವಹಿಸುತ್ತಿದ್ದಳು.

ಒಂದು ವೀಕೆಂಡ್ ಮನು ಊರಿಗೆ ಹೋದಾಗ, ದೂರದ ಧಾರವಾಡದಲ್ಲಿನ ನೆಂಟರೊಬ್ಬರು ಬಂದು ತಂಗಿಯ ಮದುವೆಯ ಬಗ್ಗೆ ಮಾತನಾಡಲು ಬಂದಿದ್ದರು. ಮನೆಗೆ ಇರುವ ಒಂದೇ ಒಂದು ದೀಪದಂತಿರುವ ಅವಳು ಕೂಡ ತಮ್ಮನ್ನು ಅಗಲುವ ಸಮಯ ಬಂತಲ್ಲವೆಂದು ದುಃಖಿಸುವುದೋ ಅಥವಾ ಸಂಭ್ರಮಿಸುವುದಾ ಗೊಂದಲದಲ್ಲಿದ್ದನು ಅವನು. ಮುಂದಿನ ವಾರ ಗಂಡು ಕರೆದುಕೊಂಡು ಬರುವುದಾಗಿ ಹೇಳಿ ಬಂದ ನೆಂಟರು ಹೋದರು. ವಾರ ಕಳೆದು ಮತ್ತೆ ಮನು ವಾಪಸಾದ. ನಕ್ಷತ್ರ ತನ್ನ ಗೆಳೆತಿಯರೊಂದಿಗೆ ಸೀರೆಯುಟ್ಟು ಶೃಂಗಾರಗೊಳ್ಳುತ್ತಿದಳು.

ಅರಗಿಣಿ ಮುದ್ದಿನರಗಿಣಿ ನನ್ನ ತಂಗಿ
ಪುಟ್ಟ ಪುಟ್ಟ ಹೆಜ್ಜೆ ಹಾಕಿ ಅಣ್ಣನೆಡೆ ಬರುತ್ತಿದ್ದ ನನ್ನ ತಂಗಿ
ಇಂದು ಸೀರೆಯುಟ್ಟ ಬೆಳದಿಂಗಳು
ಪಚ್ಚೆ ಹಸಿರ ಸೀರೆಯುಟ್ಟ ಭೂತಾಯಿಯು ಗೌಣ ಕೆಂಪು ಝರಿಯ ಸೀರೆಯುಟ್ಟ ನನ್ನ ತಂಗಿ ಎದುರು
ಆಕಾಶದ ಆ ನಕ್ಷತ್ರ ಉರಿದು ಬೀಳುತಿದೆ ಭುವಿಯಲಿ ಶೃಂಗಾರದಿ ಹೊಳೆವ ಈ ನಕ್ಷತ್ರಳ ಕಂಡು
ಈ ಅಂದಗಾತಿಯ ಚಂದದ ಮಾತಿಗೆ ಜಗ ಮರುಳು
ಅರಗಿಣಿ ಮುದ್ದಿನರಗಿಣಿ ನನ್ನ ತಂಗಿ.

ತಂಗಿಯನ್ನು ನೋಡಲು ಬಂದ ಹುಡುಗನು ಸಹ ದೂರದ ಧಾರವಾಡದ ಯೂನಿವರ್ಸಿಟೀಯಲ್ಲಿ ಅಧ್ಯಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು, ನೋಡಲು ಸ್ಪುರದ್ರೂಪಿಯಾಗಿದ್ದು ನಕ್ಷತ್ರಗೆ ಒಳ್ಳೆಯ ವರನೆಂದು ಇವರಿಗೆ ಅನ್ನಿಸಿತು. ನಕ್ಷತ್ರಳಿಗೂ ಒಪ್ಪಿಗೆ ಬಂದು, ಜಾತಕ ಫಲಗಳು ಕೂಡಿ ಬಂದವು, ಹುಡುಗನ ಮತ್ತು ಅವನ ಕುಟುಂಬದ ಬಗ್ಗೆ ವಿಚಾರಿಸಿದಾಗಲು ಒಳ್ಳೆಯ ಮಾತುಗಳು ಕೇಳಿಬಂದು ಮದುವೆಯೂ ನಿಶ್ಚಯವಾಯಿತು. ಎರಡು ತಿಂಗಳು ಕಳೆದು ಒಂದು ಶುಭ ದಿನದಂದು ಮಹೂರ್ತ ನಿಗದಿಯಾಯಿತು ಮತ್ತು ಮಲೆನಾಡಿನ ವಾಡಿಕೆಯಂತೆ ಇವರ ಮನೆ ಅಂಗಳದಲ್ಲಿಯೇ ಮದುವೆ.
ತಂಗಿಗೆ ಮತ್ತು ಭಾವನಿಗೆ ಬೇಕಾದ ಎಲ್ಲ ಬಂಗಾರ ಮತ್ತು ಬಟ್ಟೆ ಖರೀದಿ, ಎಲ್ಲಾ ನೆಂಟರಿಷ್ಟರಿಗೆ ಬಟ್ಟೆ, ಲಗ್ನ ಪತ್ರಿಕೆ ಹಂಚುವಿಕೆ ಹೀಗೆ ಒಂದೊಂದಾಗಿ ಕೆಲಸಗಳನ್ನು ಮನು ತಂದೆಯೊಡಗೂಡಿ ಮುಗಿಸುತ್ತಾ ಬಂದನು. ಇನ್ನೇನು ಮದುವೆ ಹತ್ತಿರವಾದಂತೆ ಮನೆಯ ಎದುರುಗಡೆ ಮತ್ತು ಹಿಂದೆ ಚಪ್ಪರ ಮಾಡುವ ಕೆಲಸ ಶುರುವಾಯಿತು.  ಊರಿನ ಸಮಸ್ತರೆಲ್ಲಾ   ಬಂದು ಚಪ್ಪರಕ್ಕೆ ಬೇಕಾದ ಅಡಿಕೆ ಮರಗಳು, ಹೊದಿಸಲು ಅಡಿಕೆ ಸೋಗೆ, ಚಪ್ಪರದ ಮೇಲೆ ಅಡ್ಡ ಹೊದಿಸಲು ಬೇಕಾದ ಬಿದಿರಿನ ಬೊಂಬು  ಮತ್ತು ಸೀಳಿದ ಅಡಿಕೆ ಡಬ್ಬೆಗಳು ಹೀಗೆ ಎಲ್ಲಾ ಸಾಮಗ್ರಿಗಳನ್ನು ಸರಿ ಮಾಡಿ ಎರಡೇ ದಿನದಲ್ಲಿ ನೋಡಿದರೆ ಕಣ್ಣಸೂರೆ ಗೊಳಿಸುವ ಹಾಗೆ ಚಪ್ಪರ ಹಾಕಿ ಆಯಿತು.  ಚಪ್ಪರದ ಬಲಭಾಗದಲ್ಲಿ ಅಡಿಕೆ ಕಂಭಗಳಿಂದ ಮಾಡಿದ ಮಂಟಪ,  ಆ ಕಂಭಗಳೆಲ್ಲ ಮಾವಿನಲೆ ಮತ್ತು ತಳಿರು ತೋರಣದಿಂದ ಕಂಗೊಳಿಸುತ್ತಿದೆ. ಹೀಗೆ ವಿಜ್ರಂಭಣೆಯಿಂದ ತಂಗಿಯ ಮದುವೆ ನೆರವೇರಿಸಿದ ಮನುಗೆ ಕೊನೆಯ ದಿನ ತಂಗಿಯನ್ನು ಗಂಡನ ಮನೆಗೆ ಕಳಿಸುವಾಗ ದುಃಖ ತಡೆಯಲಾಗಲಿಲ್ಲ. ಜೊತೆಗೆ ತಂದೆಯು ಇನ್ನೂ ಮನೆಯಲ್ಲಿ ಒಬ್ಬರೇ ಆಗುವರೆಂಬ ಚಿಂತೆ.

ಮದುವೆಯ ಎಲ್ಲ ಕೆಲಸಗಳು ಮುಗಿದು, ಮನೆಯಲ್ಲಿ ಅಡುಗೆ, ಬಟ್ಟೆ ಎಲ್ಲ ಕೆಲಸಗಳಿಗೆ ಒಬ್ಬಳು ಕೆಲಸದವಳನ್ನು ನೇಮಿಸಿ ಮನು ಬೆಂಗಳೂರಿಗೆ ವಾಪಸಾದನು.  ವೀಕೆಂಡ್ಗಳಲ್ಲಿ ಇವನು ಊರಿಗೆ ಹೋಗುತ್ತಾ, ಕೆಲ ವೀಕೆಂಡ್ ತಂದೆಯನ್ನೇ ಬೆಂಗಳೂರಿಗೆ ಕರೆಸಿ ಅವರಿಗೆ ಬೆಂಗಳೂರನ್ನು ತೋರಿಸುತ್ತಾ ಹೀಗೆ ಕಳೆಯುತಲಿತ್ತು  ದಿನಗಳು.

ಹೀಗೆ ತನ್ನ ನೆನಪುಗಳ ಬುಟ್ಟಿಯಿಂದ ಹೊರಬಂದು ಮನು ಟೈಮ್ ನೋಡಿದನು ಸಂಜೆ ೬ ಗಂಟೆಯಾಗಿತ್ತು ಎದ್ದು ಮುಖ ತೊಳೆದು ತನ್ನ ರೂಮ್ ಮೇಟ್ ಜೊತೆ ಪಾರ್ಕ್ನತ್ತ ವಾಯುವಿಹಾರಕ್ಕೆಂದು ಹೊರಟನು. ತಾನು ಒಂದು ಮನೆ ಮಾಡಿ ತನ್ನ ತಂದೆಯನ್ನು ಇಲ್ಲಿಗೆ ಕರೆಸಿಕೊಳ್ಳುವುದು ಉತ್ತಮ ವೆಂದು ಅವನಿಗೆ ಅನ್ನಿಸುತ್ತಲಿತ್ತು. ಹಾಗೆಯೇ ಅದೇ ಯೋಚನೆಯಲ್ಲಿ ಒಂದು ಬೆಂಚಿನ ಮೇಲೆ ಹೋಗಿ ಕೂತನು, ಅಷ್ಟರಲ್ಲಿ ಒಬ್ಬ ವ್ರದ್ದರು ಅಲ್ಲಿ ಬಂದು ಕೂತರು, ನೋಡಿದರೆ ತನ್ನ ತಂದೆಯಷ್ಟೇ ವಯಸ್ಸು, ವೇಷಭೂಷಗಳಿಂದ ಅವರು ಹಳ್ಳಿಯವರೆಂದು ಸ್ಪಷ್ಟವಾಗಿ ಗೋಚರಿಸುತಿತ್ತು. ಅವರ ಮುಖದಲ್ಲಿ ಏನೋ ಒಂದು ತರಹದ ಬೇಸರ ಭಾವ ಮೂಡಿತ್ತು. ಇವನೇ ಅವರನ್ನು ಮಾತಿಗೆಳಿದನು, ಯಾವ ಊರು ಎಲ್ಲಿ ಮನೆ ಹೀಗೆ ಅವರ ಬಗ್ಗೆ ಮಾತನಾಡಲು, ಗೊತ್ತಾಗಿದ್ದೇನೆಂದರೆ
ಅವರು ಶಿವಮೊಗ್ಗದ ಹತ್ತಿರ ಇರುವ ಒಂದು ಹಳ್ಳಿಯವರು, ಅವರ ಸತಿ ಕಾಲವಾಗಿ ೫ ವರುಷಗಳಾಯಿತೆಂದು, ಅವರ ಒಬ್ಬನೇ ಮಗ ಮತ್ತು ಸೊಸೆ ಇಲ್ಲಿ ಬೆಂಗಳೂರಿನಲ್ಲಿ ಕೆಲಸದಲ್ಲಿರುವರೆಂದು ಹೇಳಿದರು. ಅವರಿಬ್ಬರೂ ಬೆಳಿಗ್ಗೆಯೇ ಕೆಲಸಕ್ಕೆ ಹೋದರೆ ಬರುವುದು ರಾತ್ರಿ, ಮನೆಗೆಲಸದವಳು ಬಂದು ಅಡುಗೆ ಮಾಡಿ ಎಲ್ಲ ಕೆಲಸ ಮಾಡಿ ಹೋಗುವಳು. ಇವರು ಮನೆಯಲ್ಲಿ ಒಬ್ಬರೇ ಕಾಲಕಳೆಯಬೇಕು ಮಾಡಲು ಕೆಲಸವೂ ಏನಿಲ್ಲ, ಅಕ್ಕ ಪಕ್ಕದಲ್ಲೂ ಮಾತನಾಡಲು ಸಹ ಯಾರು  ಇರುವುದಿಲ್ಲ, ಸಂಜೆ ಒಮ್ಮೆ ಪಾರ್ಕಿಗೆ ಬಂದು ಇಲ್ಲಿ ಸ್ವಲ್ಪ ಸಮಯ ಕೂತು ಹೋಗುವರು, ಒಬ್ಬನೇ ಇದ್ದು ಬೇಸರ ಎಂದು ತಮ್ಮ ಬಗ್ಗೆ ಹೇಳಿಕೊಂಡರು.
ಆಗ ಮನುಗೆ ತನ್ನ ಆಲೋಚನೆ ಮತ್ತು ತನ್ನ ತಂದೆಯನ್ನು ಇಲ್ಲಿಗೆ ಕರೆಸಿಕೊಳ್ಳುವ ಬಗ್ಗೆ ತಾನು ತೆಗೆದುಕೊಂಡ ತೀರ್ಮಾನದ ಬಗ್ಗೆ ಮತ್ತೊಮ್ಮೆ ಯೋಚಿಸುವಂತಾಯಿತು.

ತನ್ನ ಜೀವನವನ್ನೇ ನಮಗಾಗಿ ಮುಡಿಪಿಟ್ಟು ನಮ್ಮನ್ನು ಸಾಕಿ ಬೆಳೆಸಿದ ಅವರನ್ನು ಈ ಇಳಿವಯಸ್ಸಿನಲ್ಲಿ ಪರಿಚಯವೇ ಇಲ್ಲದ ಈ ಕಾಂಕ್ರೀಟ್ ಕಾಡಿಗೆ ಕರೆ ತಂದು ಅವರಿಗೆ ಬೇಸರವನ್ನುಂಟು ಮಾಡುವದಕ್ಕಿಂತ ನಾನೇ ನನ್ನೂರಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಂಡರೆ ಹೇಗೆ ಎಂಬ ಆಲೋಚನೆ ಅವನಲ್ಲಿ ಮನೆ ಮಾಡಿತು. ಆದರೆ ಇದನ್ನು ಕೇಳಿದ ಜನ ಋಣಾತ್ಮಕವಾಗಿಯೇ ಮಾತನಾಡುವರು ಎಂಬುದು ಅವನಿಗೆ ತಿಳಿದಿತ್ತು. ತಾನು ಬಾಲ್ಯದಲ್ಲಿ ನೋಡಿದ ಮಲೆನಾಡು ಈಗ ತುಂಬಾ ಬದಲಾಗಿದೆ, ಮಳೆಯೇ ಕಡಿಮೆ ಆಗಿ, ಕೃಷಿಯಿಂದ ಜೀವನ ನಡೆಸಬಹುದು ಎಂಬ ನಂಬಿಕೆಯೇ ನಶಿಸಿದೆ, ಎಲ್ಲಾ ಹುಡುಗರು ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದಾರೆ, ಕೆಲಸಕ್ಕೆ ಜನ ಸಿಗುವುದೇ ಕಷ್ಟ , ಇಷ್ಟೆಲ್ಲಾ ಕಠಿನತೆಗಳನ್ನು ಎದುರಿಸಿ ನಿವಾರಿಸುವ ಧೈರ್ಯ ಇದ್ದರೆ ಮಾತ್ರ ಕೃಷಿ ಎಂಬ ಅರಿವಿನೊಂದಿಗೆ ತನ್ನ ತಂದೆಗೆ ಎಲ್ಲ ತಿಳಿಸಿ ತಾನು ಊರಿಗೆ ವಾಪಸಾಗುವ ನಿರ್ಣಯ ತೆಗೆದುಕೊಂಡನು ಮನು.  ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ತನ್ನ ಆರೇಳು ವರ್ಷದ ಬೆಂಗಳೂರಿನ ಜೀವನದಲ್ಲಿ ಜೊತೆಗಿದ್ದ ಎಲ್ಲರಿಗೂ ವಿದಾಯ ಹೇಳಿ ಬಾಳಿನ ಹೊಸ  ಅಧ್ಯಾಯದ ನಿರೀಕ್ಷೆಯಿಂದ ಮಲೆನಾಡಿನತ್ತ ಮುಖ ಮಾಡಿದನು ಮನು.

---------------ಮುಕ್ತಾಯ---------------------------------------------------------------------------

No comments:

Post a Comment